ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸದ ಶಾಸಕ ಎಂ.ವೈ. ಪಾಟೀಲ್:ಕದನ ಕುತೂಹಲ ಹೆಚ್ಚಿಸಿದ ಅಫಜಲಪುರ ಕ್ಷೇತ್ರದ ವಿಧಾನಸಭಾ ಚುನಾವಣೆ..!

( ಗುಂಡೂರಾವ್ ಅಫಜಲಪೂರ್)

ಅಫಜಲಪುರ :ನ.24: ಇನ್ನಾರು ತಿಂಗಳಲ್ಲಿ ಜರುಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಕೆ ಮಾಡಿಲ್ಲ. ಬದಲಾಗಿ ಅವರ ಇಬ್ಬರು ಪುತ್ರರೂ ಸೇರಿದಂತೆ ಇತರ ಐವರು ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಹಾಕಿದ್ದಾರೆ. ಇದರಿಂದಾಗಿ ಒಟ್ಟು ಏಳು ಜನ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನೊಂದು ಕಡೆ ಬಿಜೆಪಿಯಲ್ಲಿ ಇದೊಂದು ಬಾರಿ ತಾವೇ ಸ್ಪರ್ಧಿಸುವುದಾಗಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದಾಗ್ಯೂ, ಕಾಂಗ್ರೆಸ್ಸಿನಿಂದ ಶಾಸಕ ಎಂ.ವೈ. ಪಾಟೀಲ್ ಅವರು ಸ್ಪರ್ಧಿಸದೇ ಅವರ ಪುತ್ರರೊಬ್ಬರಿಗೆ ಟಿಕೆಟ್ ನೀಡಿದರೆ ಅವರ ವಿರುದ್ಧ ಮಾಲಿಕಯ್ಯ ಗುತ್ತೇದಾರ್ ಅವರು ಸ್ಪರ್ಧಿಸುವ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಪಾತ್ರದಾರಿಗಳು ಯಾರು?, ಸೂತ್ರದಾರಿಗಳು ಯಾರು? ಎಂಬ ಪ್ರಶ್ನೆ ಸದ್ಯಕ್ಕೆ ಉದ್ಭವಿಸಿದೆ. ಆದಾಗ್ಯೂ, ಈ ಬಾರಿಯ ಚುನಾವಣೆಯು ಟಿಕೆಟ್ ಸಲ್ಲಿಕೆಯ ಸಂದರ್ಭದಲ್ಲಿಯೇ ಕದನ ಕುತೂಹಲವನ್ನು ಹೆಚ್ಚಿಸಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿಯಲು ಗುತ್ತೇದಾರ್ ಮತ್ತು ಪಾಟೀಲ್ ಕುಟುಂಬದಲ್ಲಿ ಕುಡಿಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣಕುಮಾರ್ ಪಾಟೀಲ್ ಹಾಗೂ ಡಾ. ಸಂಜೀವಕುಮಾರ್ ಪಾಟೀಲ್ ಅವರು ತಮ್ಮ, ತಮ್ಮ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಶಾಸಕ ನಮ್ಮ ಬಾಸ್ ನಿತಿನ್ ಗುತ್ತೇದಾರ್, ಅರುಣಕುಮಾರ್ ಪಾಟೀಲ್, ಡಾ. ಸಂಜೀವಕುಮಾರ್ ಪಾಟೀಲ್ ಎಂದು ಪ್ರಚಾರ ಮಾಡುವ ಮೂಲಕ ಪಾಟೀಲ್ ಮತ್ತು ಗುತ್ತೇದಾರ್ ಕುಟುಂಬದ ಕುಡಿಗಳು ಚುನಾವಣೆಯ ಕಣಕ್ಕಿಳಿಸುವ ಆಸಕ್ತಿಯನ್ನು ಹೊರಹಾಕಿದ್ದಾರೆ.
ಇನ್ನೊಂದು ಕಡೆ 1985ರಲ್ಲಿ ಮೊದಲ ಬಾರಿಗೆ ಕ್ಷೇತ್ರದ ಶಾಸಕರಾಗುವ ಮೂಲಕ ಸುದೀರ್ಘ 38 ವರ್ಷಗಳ ಕಾಲ ರಾಜಕಾರಣದಲ್ಲಿ ಸಚಿವರಾಗಿ ಅನುಭವ ಹೊಂದಿರುವ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ವಿರೋಧಿಗಳು ಮೆಚ್ಚುವ ರೀತಿಯಲ್ಲಿ ತಮ್ಮದೇ ಆದ ಗತ್ತು ಗೈರತ್ತು ನೇರ ನುಡಿಗಳ ಹೊಂದಿರುವ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅವರು ತಮ್ಮ ತಂದೆ ಪುಣ್ಯಸ್ಮರಣೆಯ ದಿನದಂದೇ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನ ಹಾಗೂ ಅಭಿಮಾನಿಗಳು ಬಯಸಿದರೆ ಇನ್ನ ಒಂದು ಸಲ ಕೊನೆಯ ಬಾರಿ ಕಣಕ್ಕೆ ಇಳಿಯುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ಕೊನೆಯ ಸಹೋದರ ನಿತಿನ್ ಗುತ್ತೇದಾರ್ ಅವರು ರಾಜಕೀಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ ಎಂದೂ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಯುವಕರ ಬಹುದೊಡ್ಡ ಪಡೆಯನ್ನು ಹಾಗೂ ಅಪಾರ ಗೆಳೆಯರ ಬಳಗವನ್ನು ಹೊಂದಿದ್ದಾರೆ. ತಮ್ಮ ಮಾತಿನ ಶೈಲಿಯಿಂದಲೇ ಮೋಡಿ ಮಾಡುವ ಮೂಲಕ ತಮ್ಮತ್ತ ಸೆಳೆಯುವ ಆಕರ್ಷಣೆ ಅವರಲ್ಲಿದೆ. ತಂದೆಯ ಆಶೀರ್ವಾದ ಮತ್ತು ತನ್ನಣ್ಣನ ರಾಜಕೀಯ ಬಲ ಹಾಗೂ ತನ್ನ ವರ್ಚಸ್ಸು ಸೇರಿ ಎಲ್ಲವನ್ನೂ ಕ್ರೋಢಿಕರಿಸಿ ಸತತವಾಗಿ ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹ್ಯಾಟ್ರಿಕ್ ಸಾಧನೆ ಮೂಲಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ನಿತಿನ್ ಗುತ್ತೇದಾರ್ ಅವರಿಗಿದೆ.
ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನ ಕ್ಷೇತ್ರಕ್ಕೆ ಒಳಪಡುವ ಹಾಗೂ ತಮ್ಮದೇ ಹಿಡಿತದಲ್ಲಿರುವ ಫರತಾಬಾದ್ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಅನಾಯಾಸವಾಗಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಫರತಾಬಾದ್ ಕ್ಷೇತ್ರವನ್ನು ಇನ್ನಷ್ಟು ಬಿಗಿಯಾಗಿಟ್ಟುಕೊಳ್ಳಬಹುದಿತ್ತು. ಕುಟುಂಬದ ಕಪಿಮುಷ್ಠಿಯಲ್ಲಿರುವ ಫರತಾಬಾದ್ ಕ್ಷೇತ್ರವನ್ನು ಹಿಂದೆ ಬಿಜೆಪಿ ಪಕ್ಷದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ದಿಲೀಪ್ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಗೆಲ್ಲಿಸುವಲ್ಲಿ ಗುತ್ತೇದಾರ್ ಕುಟುಂಬವು ಪ್ರಮುಖ ಪಾತ್ರ ವಹಿಸಿದರೂ ಮುಂದೆ ದಿಲೀಪ್ ಪಾಟೀಲ್ ಅವರು ಕುಟುಂಬದ ಬೆಂಬಲಕ್ಕೆ ನಿಲ್ಲಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫರತಾಬಾದ್ ಕ್ಷೇತ್ರದಿಂದ ಹೇಳಿಕೊಳ್ಳುವಷ್ಟು ಗಣನೀಯ ಮತಗಳು ಕೈತಪ್ಪಿದವು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಕೆಲವೊಂದಿಷ್ಟು ಜನ ಬೆಂಬಲಿಗರು ಹುರಿದುಂಬಿಸಿದ ಹಿನ್ನೆಲೆಯಲ್ಲಿ ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ಮಾಶಾಳ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಎಂ.ವೈ. ಪಾಟೀಲ್ ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರಿಗೆ ಪಂಥಾಹ್ವಾನ ನೀಡುವ ಮೂಲಕ ಆ ಕ್ಷೇತ್ರವು ವಿಧಾನಸಭಾ ಚುನಾವಣೆಯ ರೀತಿಯಲ್ಲಿ ಪರಿವರ್ತನೆಗೊಂಡಿತ್ತು. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅರುಣಕುಮಾರ್ ಪಾಟೀಲ್ ಎದುರು ಪರಾಭವಗೊಂಡರು. ಅಂದಿನಿಂದ ತಮ್ಮ ರಾಜಕೀಯ ಕಡುವೈರಿ ಅರುಣಕುಮಾರ್ ಪಾಟೀಲ್ ಅವರನ್ನು ಮತ್ತೆ ಅವಧಿ ಮುಗಿದು ಸರ್ಕಾರ ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದರೆ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವರೋ ಆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲಿನ ರುಚಿ ತೋರಿಸಲು ನಿತಿನ್ ಗುತ್ತೇದಾರ್ ಅವರು ಮುಂದಾಗಿದ್ದರು. ಆದಾಗ್ಯೂ, ಜಿಲ್ಲಾ ಪಂಚಾಯಿತಿ ಚುನಾವಣೆಯು ಘೋಷಣೆಯಾಗದೇ ಇದ್ದುದರಿಂದ ಬೆಂಬಲಿಗರಿಗೆ ನಿರಾಸೆಯಾಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಘಳಿಗೆಯಲ್ಲಿ ಇಬ್ಬರು ನಾಯಕರು ಪಕ್ಷ ಅದಲು, ಬದಲು ಮಾಡಿ ಚುನಾವಣೆ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಅರುಣಕುಮಾರ್ ಪಾಟೀಲ್ ಅವರು ಬಹಿರಂಗಸಭೆಯೊಂದರಲ್ಲಿ ಈಡಿಗ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡುವ ಮೂಲಕ ಇಡೀ ಜಿಲ್ಲೆಯಲ್ಲಿ ಈಡಿಗ ಸಮುದಾಯದ ಆಕ್ರೋಶಕ್ಕೆ ಒಳಗಾದರು. ಇದು ಸ್ವತ: ನಿತಿನ್ ಗುತ್ತೇದಾರ್ ಅವರನ್ನೂ ಸಹ ಕೆರಳಿಸಿತ್ತು. ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಶಾಸಕ ಎಂ.ವೈ. ಪಾಟೀಲ್ ಅವರು ಸ್ಪರ್ಧೆ ಮಾಡಿದರೆ ಎದುರಾಳಿಯಾಗಿ ಅಣ್ಣ ಸ್ಪರ್ಧೆ ಮಾಡಲಿ. ವಯಸ್ಸಿನ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದು ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರು ಸ್ಪರ್ಧೆ ಮಾಡಿದಲ್ಲಿ ಕೊನೆಘಳಿಗೆಯಲ್ಲಿ ಅಣ್ಣನಿಗೆ ಮನವೊಲಿಸಿ ನಾನೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೇಳುವುದಾಗಿ ನಿತೀನ್ ಗುತ್ತೇದಾರ್ ಅವರು ನಿರ್ಧರಿಸಿರುವ ಕುರಿತು ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಮತ್ತೊಂದೆಡೆ ಬಿಜೆಪಿಯ ಹಿಂದುಳಿದ ವರ್ಗಗಳ ಮಾಜಿ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಕೂಡ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪಕ್ಷದಲ್ಲಿ ದುಡಿದ ನನಗೆ ಟಿಕೆಟ್ ಇಲ್ಲವಾದರೆ ನಾವೇನು ಬಿಜೆಪಿ ಪಕ್ಷದಲ್ಲಿ ಜೀತದಾಳುಗಳಲ್ಲ. ನಾವೂ ಕೂಡ ಟಿಕೆಟ್ ಆಕಾಂಕ್ಷಿಗಳೇ ಎಂದು ತೆರೆಮರೆಯಲ್ಲಿ ರಾಜ್ಯ ನಾಯಕರ ಮುಂದೆ ತಮ್ಮ ನಿವೇದನೆಯನ್ನು ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ಕ್ಷೇತ್ರದಲ್ಲಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿ ಸಮಾಜ ಸೇವಕ ಜೆ.ಎಂ. ಕೊರಬು, ಮುಖಂಡರಾದ ರಾಜೇಂದ್ರ ಪಾಟೀಲ್, ಮಕಬೂಲ್ ಪಟೇಲ್, ಮತಿನ್ ಪಟೇಲ್, ಪಪ್ಪು ಪಟೇಲ್, ಡಾ. ಸಂಜೀವ್ ಪಾಟೀಲ್, ಅರುಣಕುಮಾರ್ ಪಾಟೀಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಲಿ ಶಾಸಕರಿಗೆ ಟಿಕೆಟ್‍ಗೆ ಅರ್ಜಿ ಸಲ್ಲಿಸಲು ಕಡ್ಡಾಯ ಮಾಡಿದರೂ ಸಹ ಶಾಸಕ ಎಂ.ವೈ. ಪಾಟೀಲ್ ಅವರು ಮಾತ್ರ ಅರ್ಜಿ ಹಾಕಿಲ್ಲ. ಮನೆಯಲ್ಲಿಯೇ ಇಬ್ಬರು ಪುತ್ರರು ಅರ್ಜಿ ಹಾಕಿರುವಾಗ ಶಾಸಕರು ಅರ್ಜಿ ಹಾಕುವುದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಕುಟುಂಬಸ್ಥರು ಬಂದಿರುವ ಮಾಹಿತಿ ಸಿಕ್ಕಿದೆ. ಹಾಗಾಗಿ ಇಬ್ಬರು ಪುತ್ರರಲ್ಲಿ ಯಾರಿಗೆ ಪಕ್ಷದ ಟಿಕೆಟ್ ಸಿಗುತ್ತದೆ ಎಂಬುದೇ ಜಿಜ್ಞಾಸೆಯಾಗಿದೆ.
ಶಾಸಕ ಎಂ.ವೈ. ಪಾಟೀಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಆದಾಗ್ಯೂ, ಪಕ್ಷದ ವರಿಷ್ಠರು ಮಾತ್ರ ಅವರನ್ನೇ ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ. ಆದಾಗ್ಯೂ, ಯಾವುದೇ ಕಾರಣಕ್ಕೂ ಚುನಾವಣೆ ಕಣಕ್ಕಿಳಿಯದಿರಲು ಎಂ.ವೈ. ಪಾಟೀಲ್ ಅವರು ನಿರ್ಧರಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ.
ಹಾಗೆ ನೋಡಿದರೆ ಶಾಸಕ ಎಂ.ವೈ. ಪಾಟೀಲ್ ಅವರೊಂದಿಗೆ ಕ್ಷೇತ್ರದಲ್ಲಿ ರಾಜಕಾರಣ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರು ತೊಡಗಿಸಿಕೊಂಡಿದ್ದಾರೆ. ಅವರಿಗೆ ರಾಜಕೀಯ ಪಟ್ಟುಗಳೂ ಸಹ ಗೊತ್ತಿವೆ. ಅವರೊಬ್ಬ ವೃತ್ತಿ ರಾಜಕಾರಣಿ ಎಂಬುವಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದಾರೆ. ಇನ್ನೊಬ್ಬ ಪುತ್ರ ಡಾ. ಸಂಜೀವಕುಮಾರ್ ಪಾಟೀಲ್ ಅವರು ವೈದ್ಯರು. ಸಾಕಷ್ಟು ಚಿರಪರಿಚಿತರಾದರೂ ಸಹ ರಾಜಕೀಯದಲ್ಲಿ ಅಣ್ಣನಿಗಿರುವಷ್ಟು ಅನುಭವ ಅವರಿಗಿಲ್ಲ. ಹಾಗಾಗಿ ಅರುಣಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ಹೆಚ್ಚಿನ ಕಾರ್ಯಕರ್ತರದ್ದಾಗಿದೆ.
ಆದಾಗ್ಯೂ, ಈಡಿಗ ಸಮುದಾಯದ ಅವಹೇಳನವು ಅರುಣಕುಮಾರ್ ಪಾಟೀಲ್ ಅವರ ವ್ಯಕ್ತಿತ್ವಕ್ಕೆ ಈಗಲೂ ಸಹ ಧಕ್ಕೆ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಈಡಿಗ ಸಮುದಾಯದವರು ಸಹ ಅರುಣಕುಮಾರ್ ಪಾಟೀಲ್ ಅವರ ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಡಾ. ಸಂಜೀವಕುಮಾರ್ ಪಾಟೀಲ್ ಅವರು ಸಲ್ಲಿಸಿದ ಅರ್ಜಿಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ.
ಏನೇ ಆದರೂ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಖಾಸಗಿ, ಸಾಮಾಜಿಕ ಕೆಲಸ ಅಥವಾ ಪಕ್ಷದ ಕಾರ್ಯಕ್ರಮದಲ್ಲಿ ಬಿಟ್ಟು ಬಿಡದೇ ಗುತ್ತೇದಾರ್ ಹಾಗೂ ಪಾಟೀಲ್ ಕುಟುಂಬದ ಕುಡಿಗಳಾದ ನಿತಿನ್ ಗುತ್ತೇದಾರ್, ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆಯವರು ಆಯ್ಕೆಯಾಗಿದ್ದು, ಮೂಲಗಳ ಪ್ರಕಾರ ಇದೊಂದು ಬಾರಿ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಟಿಕೆಟ್ ಕೊಡಬೇಕು ಎಂಬ ನಿರ್ಧಾರವನ್ನು ಜಿಲ್ಲಾ ನಾಯಕರು ತೆಗೆದುಕೊಂಡಿದ್ದು, ಅದಕ್ಕೆ ಖರ್ಗೆಯವರು ಸಮ್ಮತಿಸಿದರೆ ಅನಿವಾರ್ಯವಾಗಿ ಮತ್ತೊಮ್ಮೆ ಎಂ.ವೈ. ಪಾಟೀಲ್ ಅವರು ಸ್ಪರ್ಧಿಸಬೇಕಾಗುತ್ತದೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಲಿದೆ. ಒಂದು ವೇಳೆ ಎಂ.ವೈ. ಪಾಟೀಲ್ ಅವರು ಕಣಕ್ಕಿಳಿಯದಿದ್ದರೆ ಮಾಲಿಕಯ್ಯ ಗುತ್ತೇದಾರ್ ಅವರ ನಿಲುವಿನ ಮೇಲೆ ಅವರ ಸಹೋದರ ನಿತಿನ್ ಗುತ್ತೇದಾರ್ ಅವರ ಭವಿಷ್ಯ ಅಡಗಿದೆ. ಏನೇ ಆದರೂ ಸದ್ಯಕ್ಕಂತೂ ಕ್ಷೇತ್ರದಲ್ಲಿ ಸೂತ್ರದಾರಿಗಳು ಯಾರು?, ಪಾತ್ರದಾರಿಗಳು ಯಾರು? ಎಂಬ ಪ್ರಶ್ನೆಗಳೊಂದಿಗೆ ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ.