ಕಾಂಗ್ರೆಸ್, ಟಿಎಂಸಿ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ,ಮಾ.೨೦- ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಕಣ ಕಾವೇರುತ್ತಿದ್ದು. ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಈ ನಡುವೆ ಪ್ರಧಾನಮಂತ್ರಿ ನರೇಂದ್ರ
ಮೋದಿಯವರು, ತಮ್ಮ ಅದಿಕೃತ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಅವರು ಸರಣಿ
ಟ್ವೀಟ್ ಮಾಡಿದ್ದಾರೆ.
’ದಶಕಗಳಿಂದ ಕಾಂಗ್ರೆಸ್ ಪಕ್ಷವು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷ್ಯಿಸಿದ್ದು, ಮರೆತಿದೆ. ಆದರೆ ಎನ್ಡಿಎ ಸರ್ಕಾರವು ಸಾಮಾಜಿಕ ಸಬಲೀಕರಣದ ಕಡೆಗೆ ಹೆಚ್ಚು ಗಮನಹರಿಸುತ್ತಿದೆ. ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕಾಗಿ ಧನ್ಯವಾದ ಕರೀಂಗಂಜ್’ ಎಂದು ಮೋದಿರವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಅಸ್ಸಾಂನ ಕರೀಂಗಂಜ್ನಲ್ಲಿ ಬಹಿರಂಗ ಸಭೆ ನಡೆಸಿದ ಮಾರನೇ ದಿನ, ಮೋದಿಯವರು ಈ ಟ್ವೀಟ್ ಮಾಡಿದ್ದಾರೆ. ಟಿಎಂಸಿ ವಿರುದ್ದವೂ ಟೀಕಾಪ್ರಹಾರ ನಡೆಸಿದ್ದಾರೆ. ’ವಿಧಾನಸಭೆ ಚುನಾಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯ ಸಾಧಿಸುತ್ತದಂತೆ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೊಸ ಶಕೆ ಆರಂಭವಾಗಲಿದೆ. ಬಿಜೆಪಿಯ ಗೆಲುವು ಹೊಸ ಯುಗದ ಆರಂಭದ ದಿಕ್ಸೂಚಿಯಾಗಲಿದೆ. ಹಾಗೆಯೇ ಟಿಎಂಸಿ ಕಾರ್ಯಕರ್ತರ ಬೆದರಿಸುವಿಕೆಗೂ ಕೊನೆಯಾಡಲಿದೆ’ ಎಂದು ಮತ್ತೊಂದು ಸಂದೇಶದಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪುರುಲಿ ಎಂಬಲ್ಲಿ ನಡೆದ ಟಿಎಂಸಿ ಬಹಿರಂಗ ಸಮಾವೇಶದಲ್ಲಿ ಮಮತಾ ಬ್ಯಾನಜರ್?ರವರು, ಖೇಲಾ ಹೋಬ್ ಎಂಬ ಘೋಷಣೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ’ದೀದಾ ಹೇಳ್ತಾರೆ ಆಟ ಶುರುವಾಗಿದೆ ಎಂದು. ಆದರೆ ಬಿಜೆಪಿ ಹೇಳುತ್ತದೆ ವಿಕಾಸ, ಉದ್ಯೋಗ, ಶಿಕ್ಷಣ ಸ್ನೇಹ ಆರಂಭವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.