ಸಂಜೆವಾಣಿ ವರದಿ
ರಾಯಚೂರು ಏ 18
ಮಾಜಿ ಲೋಕಸಭಾ ಸದಸ್ಯರು, ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ. ವಿ. ನಾಯಕ್ ಅವರು ಅಧಿಕೃತವಾಗಿ ಇಂದು ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ಇರುವುದರಿಂದ ಅಸಮಾಧಾನಗೊಂಡಿದ್ದ ಬಿ ವಿ ನಾಯಕ್ ಅವರಿಗೆ ಬಿಜೆಪಿ ರಾಜ್ಯ ನಾಯಕರು ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿತ್ತು,ಹೇಳಿದಂತೆ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ ವಿ ನಾಯಕ್ ಅವರನ್ನು ಕಣಕ್ಕೆ ಇಳಿಸುತ್ತಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಬಿ ವಿ ನಾಯಕ ಅವರು ಕಳೆದ ಒಂದು ವಾರದಿಂದ ಮಾನ್ವಿ ಕ್ಷೇತ್ರದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಅಭ್ಯರ್ಥಿ ಆಗಬೇಕೆಂದು ಒತ್ತಡ ಹಾಕಿದರು ಅವರ ಪ್ರೀತಿಯ ಬಲವಂತದಿಂದ ಪಕ್ಷಕ್ಕೆ ಸೇರ್ಪಡೆಯಾಗಿರುವೆ ಎಂದು ತಿಳಿಸಿದರು.
ನಾನು ಯಾವುದೇ ಅಧಿಕಾರದ ಆಸೆಗಾಗಿ ಸೇರಿಲ್ಲ, ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗಾಗಿ ಜಿಲ್ಲೆಯ ಮೂರು ಮೀಸಲು ಕ್ಷೇತ್ರಗಳಲ್ಲಿ ನಾನು ಸ್ಪರ್ದಿಸುವ ಅವಕಾಶ ಕೇಳಿದೆ, ಆದರೆ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಲಿಲ್ಲ, ಅದು ತೀವ್ರ ಮುಜುಗರಕ್ಕೆ ಒಳಪಡುವಂತೆ ಮಾಡಿತು. ನಮ್ಮ ಮನೆತನ ಪೂರ್ತಿ ಕಾಂಗ್ರೆಸ್ ಪಕ್ಷಕ್ಕಾಗಿ ಸರ್ವ ತ್ಯಾಗ ಮಾಡಿದ್ದೇವೆ, ಆದರೆ ನಮನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ, ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಕಾರಣ ಯಾರೆಂದು ಕ್ಷೇತ್ರದ ಜನತೆಗೆ ಗೊತ್ತಿದೆ ಅವರಿಗೆ ಒಳ್ಳೇದು ಆಗಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಅನೇಕ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.