ಕಾಂಗ್ರೆಸ್ ಜನಪರ ಪಕ್ಷ ಗೆಲುವಿನ ವಿಶ್ವಾಸದಲ್ಲಿ ನಾರಾ ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ಪ್ರಧಾನಿ ಮೋದಿ ಅವರು ನಗರದ ಹೊರ ವಲಯದಲ್ಲಿ ಬರೀ ಭಾಷಣ ಮಾಡಿ ಹೋದರೆ. ಅವರ ಮಾತಿಗೆ ಈಗ ಮರುಳಾಗುವ ಜನರಿಲ್ಲ‌. ನಗರದಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರ ಆಗದೆ ಕೇವಲ ಭಾವನಾತ್ಮಕ ಮಾತಿಗೆ ಮಾವಿನ‌ಕಾಯಿ ಉದುರುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಖಚಿತ ಅದೇರಿತಿ ನಿಮ್ಮೆಲ್ಲರ ಆಶಿರ್ವಾದದಿಂದ ನನ್ನ ಗೆಲುವು ಸಹ ಖಚಿತ ಎಂದು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು  ಬೆಳಿಗ್ಗೆ ನಗರದ 37 ಮತ್ತು 38 ನೇ ವಾರ್ಡಿನ ಪ್ರದೇಶಗಳಲ್ಲಿ ರೋಡ್ ಶೋ ಮತ್ತು ಮನೆ ಮನೆ ಪ್ರಚಾರ ನಡೆಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಬಡವರ, ಮಹಿಳೆಯರ, ರೈತರ, ಕಾರ್ಮಿಕರ, ವೃತ್ತಿಪರರ ಎಲ್ಲ ಜಾತಿ ಧರ್ಮದ ಜನರ ಕಲ್ಯಾಣ ಮಾಡುವಂತಹ ಜನಪರ ಪಕ್ಷವಾಗಿದೆ. ಸಾಮಾಜಿಕ ನ್ಯಾಯದ ತತ್ವದಡಿ ವಿಶ್ವಾಸವಿಟ್ಟಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸರ್ವ ಜನಾಂಗದ ಜನರ ಅಭಿವೃದ್ಧಿ ಸಾಧ್ಯ ಎಂದರು.
  ಕಾಂಗ್ರೆಸ್ ಪಕ್ಷದಿಂದ  ಐದು  ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳು, ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್, ಬಿಪಿಎಲ್ ಚೀಟಿ ಇರುವ ಕುಟುಂಬದ ಪ್ರತಿ ಸದಸ್ಯನಿಗೆ
10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಅಡಿ ಭತ್ಯೆ, ರಾಜ್ಯದ 25 ಸಾವಿರ ಪೌರ ಕಾರ್ಮಿಕರ ನೇಮಕಾತಿ ಹಾಗೂ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡಲಿದೆಂದು ಹೇಳಿದರು.
ಪಾಲಿಕೆ ಸದಸ್ಯ ವಿ.ಕುಬೇರ ಮೊದಲಾದ ಮುಖಂಡರು ಪ್ರಚಾರದಲ್ಲಿ ತೊಡಗಿದ್ದರು.