ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ

ಅರಕೇರಾ,ಮಾ.೦೯- ದೇಶದ ಎಲ್ಲ ವರ್ಗದ ಜನರು ನೆಮ್ಮದಿಯಿಂದ ಜೀವಿಸಬೇಕಾದರೆ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಮಾತ್ರ ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.
ಸಮೀಪದ ಮಲ್ಲೆದೇವರಗುಡ್ಡ ಗ್ರಾಮದಲ್ಲಿನ ಗೃಹಿಣಿಯರಿಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು. ಬಡವರು, ನಿರ್ಗತಿಕರು, ಅಸಂಘಟಿತರು, ಅಸಹಾಯಕರು, ಮಹಿಳೆಯರು ಸೇರಿ ಎಲ್ಲ ವರ್ಗದವರು ಬಿಜೆಪಿ ದುರಾಡಳಿತದಿಂದ ತುಳಿತಕ್ಕೆ ಒಳಗಾಗಿದ್ದಾರೆ. ಸಂಪೂರ್ಣ ಭ್ರಷ್ಟಾಚಾರ ಮಾಡುವ ಮೂಲಕ ದೇಶವನ್ನು ಬಿಜೆಪಿಯವರು ಮಾರಾಟ ಮಾಡಲು ಸಜ್ಜಾಗಿದ್ದಾರೆ. ಬಿಜೆಪಿ ದುರಾಡಳಿತಕ್ಕೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ ಅಭಿಯಾನದಿಂದ ಜನರಲ್ಲಿ ವಿಶ್ವಾಸಾರ್ಹ ಪ್ರತಿಕ್ರಿಯೆಗಳು ಹೊರಹೊಮ್ಮುತ್ತಿದ್ದು, ಗೃಹಿಣಿಯರಿಗೆ ಮಾಸಿಕ ೨೦೦೦ ನೀಡುವ ಮೂಲಕ ಶಕ್ತಿ ತುಂಬುವ ಕೆಲಸವಾಗಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿವೆ. ಆದರೆ ಬಿಜೆಪಿಯ ಅವೈಜ್ಞಾನಿಕ ಯೋಜನೆಗಳು ಶಾಸಕರು ಹಾಗೂ ಬೆಂಬಲಿಗರ ಪಾಲಾಗಿದ್ದು, ಅರ್ಹರಿಗೆ ವಂಚನೆಯಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ನಾಗನಗೌಡ, ದುರಗಪ್ಪ ನಾಯಕ, ಬಸವರಾಜ ನಾಯಕ, ವೆಂಕಟೇಶ್ ನಾಯಕ, ವಿರೇಶ್ ನಾಯಕ, ವೆಂಕಟೇಶ, ಬಗಯ್ಯ ಮಾಳೆ, ರಮೇಶ ಅಬಕಾರಿ, ಹನುಮೇಶ ನಾಯಕ, ಹನುಮಂತ ಬಡೆಗೇರ, ನಾಗಪ್ಪ ನಾನ್ಯಾಕೆ, ಶಿವಣ್ಣ, ಮಾದೇವ, ನಾಗರಾಜ್ ನಾಗಲದಿನ್ನಿ, ಹನುಮಂತಿ, ಬಸ್ಸಮ್ಮ, ಯಲ್ಲಮ್ಮ ಇತರರಿದ್ದರು.