
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ,29- ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿರುವುದರಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿಕೊಂಡು ಜನರಿಗೆ ಮಂಕು ಬೂದಿ ಎರಚಲು ಹೊರಟಿದೆ. ರಾಜಸ್ತಾನದಲ್ಲಿ ಚುನಾವಣೆಗೆ ಮುನ್ನ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಹುಸಿಯಾಗಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನರಿಗೆ ಮಂಕುಬೂದಿ ಎರಚಲು ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡುತ್ತಿದೆ. ಅವರ ಸುಳ್ಳುಗಳಿಗೆ ಯಾರೂ ಮಾರು ಹೋಗಬಾರದು. ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯಿತರ ನಡುವೆ ಸಿದ್ದರಾಮಯ್ಯ ಒಡಕು ಉಂಟು ಮಾಡಿ ಅಧಿಕಾರ ಕಳೆದುಕೊಂಡರು. ಆದರೆ ಬಿಜೆಪಿ ಲಿಂಗಾಯಿತ ಸಮುದಾಯ ಸೇರಿದಂತೆ ಪರಿಶಿಷ್ಟರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡಿ ಸಾಮಾಜಿಕ ಕ್ರಾಂತಿ ಮಾಡಿದೆ. ಮೀಸಲಾತಿ ಹೆಚ್ಚಳದಲ್ಲಿ ಪಾಲು ಪಡೆದಿರುವ ಎಲ್ಲ ಸಮುದಾಯಗಳು ಬಿಜೆಪಿ ಬೆಂಬಲಿಸಿ ಋಣ ತೀರಿಸಬೇಕು ಎಂದು ಕರೆ ನೀಡಿದರು.
ಮೋದಿ ನಾಯಕತ್ವದಲ್ಲಿ ದೇಶ ಸುಭದ್ರವಾಗಿದೆ. ಪಾಕಿಸ್ತಾನ, ಚೀನಾದ ಬೆದರಿಕೆ ತಂತ್ರಗಳಿಗೆ ಮೋದಿ ಸರಿಯಾಗಿ ಉತ್ತರ ಕೊಡುತ್ತಾರೆ. ವಿಶ್ವ ಮೆಚ್ಚಿರುವ ಪ್ರಬಲ ನಾಯಕ ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಎಂದು ಜರಿದಿದ್ದಾರೆ. ಉಗ್ರವಾದಿಗಳಿಗೆ, ಭ್ರಷ್ಟಾಚಾರಿಗಳಿಗೆ ಮೋದಿ ವಿಷ ಸರ್ಪವೇ ಆಗಿದ್ದಾರೆ. ದೇಶದ ಅಭಿವೃದ್ಧಿಗೆ ಮಾರಕವಾದವರ ರಕ್ಷಣೆಗೆ ನಿಂತ ಸೋನಿಯಾಗಾಂಧಿ ವಿಷಕನ್ಯೆಯಾಗಿದ್ದಾರೆ ಎಂದು ಟೀಕಿಸಿದರು.
ಮೋದಿಯವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಜಗತ್ತಿನ 5ನೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ. ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ, ಮುಖಂಡರಾದ ಓದೋ ಗಂಗಪ್ಪ, ಪಿ.ವಿಜಯಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಎಂ.ಬಿ.ಬಸವರಾಜ, ಈಟಿ ಲಿಂಗರಾಜ, ಸಿರಾಜ್ ಬಾವಿಹಳ್ಳಿ, ಎಲ್.ಸೋಮಿನಾಯ್ಕ, ವೀರನಗೌಡ ಇತರರು ಇದ್ದರು.
ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ
ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ದುರಹಂಕಾರಿ ಶಾಸಕ ಪರಮೇಶ್ವರನಾಯ್ಕನಿಗೆ ಪಾಠ ಕಲಿಸಲು ಜನರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಹೇಳಿದರು.
ಹಿಂದೆ ಹಡಗಲಿ ಕ್ಷೇತ್ರ ಸುಸಂಸ್ಕೃತ ರಾಜಕಾರಣಕ್ಕೆ ಪ್ರಸಿದ್ಧಿಯಾಗಿತ್ತು. ಆದರೆ ಈಗ ಭ್ರಷ್ಟಾಚಾರ, ದುರಂಹಕಾರದ ಕಳಂಕ ಮೆತ್ತಿಕೊಂಡಿದೆ. ಕಾಮಗಾರಿ ನಿರ್ವಹಿಸಲು, ಕಟ್ಟಡ ಸಾಮಗ್ರಿ ಸರಬರಾಜು ಮಾಡಲು ಹರಪನಹಳ್ಳಿಯವರು ಬೇಕು. ಮತ ನೀಡಲು ಮಾತ್ರ ಹಡಗಲಿ ಜನ ಬೇಕು. ಸಮಾಜದಲ್ಲಿ ಅಧರ್ಮ, ಅನೀತಿ ಹೆಚ್ಚಾದಾಗ ಪ್ರಕೃತಿಯೇ ಪಾಠ ಕಲಿಸುವಂತೆ ಶಾಸಕನ ದುರಾಡಳಿತಕ್ಕೆ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ. ಜನರು ಯೋಚಿಸಿ ಇವರಿಗೆ ಪಾಠ ಕಲಿಸಬೇಕು ಎಂದರು.