ಕಾಂಗ್ರೆಸ್ ಗ್ಯಾರಂಟಿ ಪಕ್ಕ

ಬ್ಯಾಡಗಿ,ಮೇ31 : ಕ್ಷೇತ್ರದ ಮತದಾರರೆಲ್ಲರ ಪ್ರೀತಿ, ವಿಶ್ವಾಸಕ್ಕೆ ತಾವು ಚಿರಋಣಿಯಾಗಿದ್ದು, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಬಡವ -ಬಲ್ಲಿದ, ಜಾತಿಮತ ಮತ್ತು ಪಕ್ಷಭೇದವಿಲ್ಲದೇ ಜನಪರ ಸೇವೆ ಸಲ್ಲಿಸುವ ಮೂಲಕ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಆದ್ಯತೆ ನೀಡುವುದಾಗಿ ನೂತನ ಶಾಸಕರಾದ ಬಸವರಾಜ ಶಿವಣ್ಣನವರ ಹೇಳಿದರು

ಪಟ್ಟಣದ ಶ್ರೀಸಿದ್ಧೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬ್ಯಾಡಗಿ ಕ್ಷೇತ್ರದ ಮತದಾರರಿಗೆ ಹಾಗೂ ನೂತನ ಶಾಸಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಬಿಂದುವಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 2013ರಲ್ಲಿ ತಾವು ಮೊದಲ ಬಾರಿಗೆ ಬ್ಯಾಡಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಪರಿಪೂರ್ಣ 5ವರ್ಷಗಳ ಕಾಲ ನಡೆಸಿದ ಅಭಿವೃಧ್ದಿ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದು, ಅದೇ ತಮ್ಮ ಗೆಲುವಿಗೆ ಮುಖ್ಯ ಕಾರಣ ಎಂದು ಸ್ಮರಿಸಿದರಲ್ಲದೇ, ತಾವು 1994ರಲ್ಲಿ ಮೊದಲ ಬಾರಿಗೆ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದ ಸಂದರ್ಭದಲ್ಲಿ ಅಂದು ಮತದಾರರಿಗೆ ತಮ್ಮ ಮೇಲಿದ್ದ ಪ್ರೀತಿ ವಿಶ್ವಾಸದ ಒಲವಿನ ಗೆಲುವು ಮೂವತ್ತು ವರ್ಷಗಳ ನಂತರ ಮತ್ತೇ ಬ್ಯಾಡಗಿ ಕ್ಷೇತ್ರದಲ್ಲಿ ಕಂಡು ಬಂದಿವೆ ಎಂದು ಭಾವೋದ್ವೇಗದಿಂದ ತಮ್ಮ ಮನದಾಳದ ಸಂತಸವನ್ನು ಹಂಚಿಕೊಂಡರು.

ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಪ್ರಮುಖ ಗ್ಯಾರಂಟಿ ಕಾರ್ಯಕ್ರಮಗಳನ್ನು ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಜನತೆಗೆ ತಲುಪಿಸಲು ಈಗಾಗಲೇ ಮುಂದಾಗಿದೆ. ಕ್ಷೇತ್ರದ ಜನರು ವಿರೋಧಿ ಪಕ್ಷಗಳ ಊಹಾಪೆÇೀಹಕ್ಕೆ ಕಿವಿಗೊಡದೇ ಶೀಘ್ರದಲ್ಲಿಯೇ ಆರಂಭವಾಗುವ ಗ್ಯಾರಂಟಿ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರಲ್ಲದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತದಾರರು ನಮ್ಮವರೇ, ಇಲ್ಲಿ ನಾವು ಯಾರಿಗೂ ಪಕ್ಷಭೇದ ಮಾಡುವುದಿಲ್ಲ, ಪ್ರತಿಯೊಬ್ಬರೂ ಪಕ್ಷಭೇದ ಮರೆತು ಆಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ರಾಜ್ಯದ ಸಂದಿಮೂಲೆ ಸೇರಿದಂತೆ ಗಲ್ಲಿ,ಗಲ್ಲಿಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಬಂದು ಬಿಜೆಪಿ ಪರ ಪ್ರಚಾರ ಮಾಡಿದರೂ ಅದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳ ಮುಂದೆ ಠುಸ್ಸಾಗಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರಲ್ಲದೇ, ಈ ಹಿಂದಿನ ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಯಾಗಿ 40ಪರ್ಸೆಂಟ್ ಸರ್ಕಾರವಾಗಿ ಭ್ರಷ್ಟ ವ್ಯವಸ್ಥೆಯನ್ನು ಹುಟ್ಟು ಹಾಕಿತ್ತು. ಅನಗತ್ಯ ಜಾತಿ ಗಲಭೆ, ದೌರ್ಜನ್ಯ ಪ್ರಕರಣಗಳಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನೋವನ್ನು ಅನುಭವಿಸುವಂತೆ ಮಾಡಿದೆ. ಅತಿವೃಷ್ಠಿಯ ಸಂದರ್ಭದಲ್ಲಿ ಪರಿಹಾರ ತಾರತಮ್ಯ ನೀತಿ ಅನುಸರಿಸಿದ್ದು, ಅದರ ಸೋಲಿಗೆ ಮುಖ್ಯ ಕಾರಣ ಎಂದು ಆರೋಪಿಸಿದರಲ್ಲದೇ, ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟು ಗೆಲ್ಲಿಸಿದ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟೀ ಕಾರ್ಯಕ್ರಮಗಳನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾಡಗಿ ಮತ್ತು ಕಾಗಿನೆಲೆ ಬ್ಲಾಕ್ ಅಧ್ಯಕ್ಷರುಗಳಾದ ದಾನಪ್ಪ ಚೂರಿ, ಶಿವನಗೌಡ ವೀರನಗೌಡ್ರ, ಮುಖಂಡರಾದ ಏಕನಾಥ ಭಾನುವಳ್ಳಿ, ಸುರೇಶಗೌಡ ಪಾಟೀಲ, ಬಸವರಾಜ ಸವಣೂರು, ಸಿ.ಆರ್.ಬಳ್ಳಾರಿ, ಬೀರಪ್ಪ ಬಣಕಾರ, ನಾಗರಾಜ ಆನ್ವೇರಿ, ಪ್ರಕಾಶ ಬನ್ನಿಹಟ್ಟಿ, ಶಂಭು ಪಾಟೀಲ, ಬೀರಪ್ಪ ಮೆಡ್ಲೇರಿ, ವೀರೇಶ ಮತ್ತಿಹಳ್ಳಿ, ಅಬ್ದುಲಮುನಾಫ್ ಎಲಿಗಾರ, ರವಿ ಪೂಜಾರ, ವೀರನಗೌಡ ಪೆÇೀಲೀಸಗೌಡ್ರ, ಖಾದರಸಾಬ ದೊಡ್ಡಮನಿ, ಶಂಭಣ್ಣ ಕಲ್ಲೆದೇವರ, ಪ್ರೇಮಾ ಅಂಗಡಿ, ಸುಮಿತ್ರಮ್ಮ ನವಲೆ, ಶಿವಪುತ್ರಪ್ಪ ಅಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕಾ ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಿ.ಎಚ್.ಬುಡ್ಡನಗೌಡ್ರ ಸ್ವಾಗತಿಸಿದರು. ಮಾರುತಿ ಅಚ್ಚಿಗೇರಿ ವಂದಿಸಿದರು.