ಕಾಂಗ್ರೆಸ್ ಗ್ಯಾರಂಟಿ ಕಾಪಿ ಹೊಡೆದ ನರೇಂದ್ರ ಮೋದಿ: ಆಂಜನೆಯ

ಬೀದರ್: ಮೇ.3:ಮೊದಲು ಗ್ಯಾರಂಟಿಯನ್ನು ಟೀಕಿಸಿದ ಬಿಜೆಪಿ ಸರ್ಕಾರವೇ ಈಗ ಜನತೆಗೆ ಗ್ಯಾರಂಟಿಗಳನ್ನು ನೀಡುತ್ತಿದೆ. ಕಾಂಗ್ರೇಸ್ ಗ್ಯಾರಂಟಿ ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗ ಜನತೆಗೆ ಗ್ಯಾರಂಟಿ ನೀಡಿ ನಮ್ಮ ಸರ್ಕಾರದ ಕಾಪಿ ಹೊಡೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್ ಅವರು ಬೆಲೆ ನಿಯಂತ್ರಣ ಮಾಡಿ ಈ ರಾಷ್ಟ್ರವನ್ನು ಉತ್ತಮ ರೀತಿಯಿಂದ ಮುನ್ನಡೆಸಿಕೊಂಡು ಹೋಗಿದ್ದರು. ಆದರೆ ನಮ್ಮ ಕಾಂಗ್ರೇಸ್ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿ, ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಸಾಲ ಮನ್ನಾ ಮಾಡಲಿಲ್ಲ. ಸುಳ್ಳು ಎಂದರೆ ಬಿಜೆಪಿ, ಬಿಜೆಪಿ ಎಂದರೆ ಸುಳ್ಳು. ಇದೊಂದು ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಕ್ಷದ ವಾಮಚಾರ ನೀತಿ, ಭ್ರಷ್ಟಾಚಾರದ ತಾಂಡವ, ಜನವಿರೋಧಿ ನೀತಿಯಿಂದ ಕರ್ನಾಟಕದಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಿದರು. ಬಿಜೆಪಿಗರು ಅಧಿಕಾರದ ಅಟ್ಟಹಾಸದಿಂದ ಮೆರೆದು ಬರೀ ಲಂಚಗುಳಿತನದಲ್ಲಿ ಮುಳುಗಿ ಹೋಗಿದ್ದಾರೆ. ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಸಾಗರ ಖಂಡ್ರೆ ಒಬ್ಬ ಯುವಕ. ಉತ್ಸಾಹಿ. ಆತನಿಗೆ ಮತ ನೀಡಿ ಸಂಸತ್‍ಗೆ ಕಳಿಸಬೇಕೆಂದು ಎಚ್.ಆಂಜನೇಯ ತಿಳಿಸಿದರು.
ವಿಧಾನ ಪರಿಷತ್ ಸಚೇತಕರು ಹಾಗೂ ಎಂಎಲ್‍ಸಿ ಸಲೀಮ್ ಅಹಮ್ಮದ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರ ವಿಶ್ವಾಸ ಗಳಿಸಿಕೊಂಡಿದ್ದೇವೆ. ಸುಳ್ಳು ಹೇಳುವುದರಲ್ಲಿ ಆಸ್ಕರ್ ಪ್ರಶಸ್ತಿ ನೀಡಬೇಕಾದರೆ ಅದು ಬಿಜೆಪಿ ಸರ್ಕಾರಕ್ಕೆ ನೀಡಬೇಕು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗಾಗಿ 15 ಲಕ್ಷ ಅಕೌಂಟ್‍ಗೆ ಹಾಕಲಿಲ್ಲ. ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಬದಲಾಗಿ ಜನರು ತತ್ತರಿಸುವಂತೆ ಅಧಿಕಾರ ನಡೆಸಿದ್ದಾರೆ. 10 ವರ್ಷಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದನ್ನು ತಡೆಯುವ ಶಕ್ತಿ ಬಿಜೆಪಿಗಿಲ್ಲ ಎಂದರು. ಜನತೆಗೆ ಮನ್‍ಕಿ ಬಾತ್‍ಗಿಂತ ಕಾಮ್‍ಕಿ ಬಾತ್ ಅವಶ್ಯಕವಾಗಿದೆ. ಮೋದಿಯವರು ಅದಾನಿ ಅಂಬಾನಿಯಂಥವರಿಗೆ ಸಹಾಯ ಮಾಡುತ್ತಾರೆ. ವಿದೇಶ ಸುತ್ತಾಡುತ್ತಾರೆ. ಕಳೆದ 70 ವರ್ಷಗಳಲ್ಲಿ ಜನರಲ್ಲಿದ್ದ ಶಾಂತಿ ನೆಮ್ಮದಿ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಹಾಳು ಮಾಡಿದೆ ಎಂದರು. ರಾಜ್ಯದಲ್ಲಿ ಬರಗಾಲ ಬಿದ್ದರೂ ಬರ ಪರಿಹಾರ ನೀಡಲಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಹಾಗೂ ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಅಬ್ದುಲ್ ಮನ್ನಾನ್ ಸೇಠ್, ಸಂಜಯ ಜಾಗಿರದಾರ, ಚಂದ್ರಕಾಂತ ಹಿಪ್ಪಳಗಾವೆ, ರೋಹಿದಾಸ್ ಘೋಡೆ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.