ಕಾಂಗ್ರೆಸ್ ಗ್ಯಾರಂಟಿ ಆಧರಿಸಿ ಮತ ಯಾಚನೆ: ಸಚಿವ ಎಚ್.ಕೆ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.22: ಈ ಬಾರಿ ಚುನಾವಣೆಯಲ್ಲಿ ಐದು ಗ್ಯಾರಂಟಿಗಳ ಸಾಧನೆಯನ್ನು ಜನತೆಗೆ ಮನವರಿಕೆ ಮಾಡುವ ಮೂಲಕ ಮತ ಯಾಚಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜನತೆಗೆ ನೀಡಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಈ ಬಗ್ಗೆ ಮತದಾರರಿಗೆ ತಿಳಿಸಲಾಗುವುದು ಎಂದರು.
ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿಕೊಂಡರು.
163.52 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಅನುಕೂಲವನ್ನು ಪಡೆದಿದ್ದಾರೆ. ಗೃಹ ಜ್ಯೋತಿಯಲ್ಲಿ 1 ಕೋಟಿ 66 ಲಕ್ಷ ಫಲಾನುಭವಿಗಳು ಇದ್ದು, 60 ಲಕ್ಷ ಜನರಿಗೆ ನಾವು ಸೌಲಭ್ಯ ಒದಗಿಸಿದ್ದೇವೆ. ನಮ್ಮ ಪಂಚ ಗ್ಯಾರಂಟಿಗಳು ಯಶಸ್ವಿಯಾಗಿವೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿದರೆ ಕೇಂದ್ರದಲ್ಲಿ ಕಾಂಗ್ರೆಸ ಸರ್ಕಾರ ಅಧಿಕಾರಕ್ಕೆ ಬಂದರೆ 1 ಲಕ್ಷ ಮಹಿಳೆಯರಿಗೆ ನೀಡಲಾಗುವುದು. ಅದರ ಜೊತೆ ಪಂಚ ನ್ಯಾಯ ಕೊಡಲಾಗುವುದು ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.