ಕಾಂಗ್ರೆಸ್ ಗೆ ಬೆಂಬಲ ಘೋಷಣೆ

ಕೋಲಾರ,ಮಾ.೨೫- ಬಂಗಾರಪೇಟೆ ಕಳೆದ ಹತ್ತು ವರ್ಷಗಳಿಂದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಆದಂತ ಚಾಪನ್ನು ಮೂಡಿಸಿ ಎರಡು ಬಾರಿ ಶಾಸಕರಾಗಿ ಇದೀಗ ಹ್ಯಾಟ್ರಿಕ್ ಬಾರಿಸಲು ಪ್ರಯತ್ನ ಪಡುತ್ತಿರುವ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ವೇಗಕ್ಕೆ ಕಡಿವಾಣ ಹಾಕಲು ಯಾರೇ ಎಷ್ಟೇ ಪ್ರಯತ್ನ ಪಟ್ಟರು ತಾವು ಅವರ ಬೆನ್ನಿಗೆ ನಿಂತು ಅವರನ್ನು ಈ ಬಾರಿ ಶಾಸಕರನ್ನಾಗಿ ಆರಿಸಿ ಕಳುಹಿಸಿ ಸಚಿವರನ್ನಾಗಿ ನೋಡುವ ಇರಾದೆ ಇಟ್ಟುಕೊಂಡಿದ್ದೇವೆ ಎಂದು ಕೋಲಾರ ಹಿರಿಯ ಹಾಗೂ ಪ್ರಭಾವಿ ಮುಖಂಡ ವಡಗೂರು ಡಿ.ಎಲ್ ನಾಗರಾಜ್ ಅಭಿಪ್ರಾಯ ಪಟ್ಟರು.
ಅವರು ನಗರದ ಹೊರವಲಯದ ಆರಾಧ್ಯ ಗ್ರಾಂಡ್ ಹೋಟೆಲ್ ನಲ್ಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಅಭಯ ಹಸ್ತವನ್ನು ನೀಡುತ್ತಾ, ನಾನಿದ್ದೇನೆ ನೀವು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ, ಬೆನ್ನಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ವಡಗೂರು ಡಿಎಲ್ ನಾಗರಾಜ್ ರವರ ಅಭಯಹಸ್ತಕ್ಕೆ ಮನಸೋತ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೆ ನಾನು ೧೦ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ ಇದೀಗ ನನ್ನ ಬೆನ್ನಿಗೆ ವಡಗೂರು ನಾಗರಾಜ್ ರವರು ನಿಂತಿರುವುದು ನನಗೆ ಆನೆ ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿ ಮತದಾರರ ಬಳಿಗೆ ಬರುತ್ತಿದ್ದು ಈ ಬಾರಿಯೂ ಮತದಾರ ಪ್ರಭುಗಳು ನನ್ನನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್ ಕುಮಾರ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಸಿಎಂ ನಾರಾಯಣಸ್ವಾಮಿ, ರಾಮಕೃಷ್ಣೇಗೌಡ, ಅಬ್ಬಣಿ ನಾಗರಾಜ್, ಸಂತೋಷ್ ರೆಡ್ಡಿ, ಅಲ್ಲಿಕುಂಟೆ ವೆಂಕಟೇಶ್, ನಡುಪಳ್ಳಿ ಸಂತೋಷ್, ಯಾರಂಘಟ್ಟ ಮುನಿರಾಜು, ನಂದಂಬಳ್ಳಿ ಕೋದಂಡಪ್ಪ, ರವಿ, ತಾತಪ್ಪ, ಶಾಪೂರು ಸೊಣ್ಣೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್, ಗಿರೀಶ್, ಕೆಂಬೋಡಿ ಗಿರೀಶ್, ಅಜ್ಜಪ್ಪನಹಳ್ಳಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ೨೬ರಂದು ಭಾನುವಾರ ಮಧ್ಯಾಹ್ನ ೧ ಗಂಟೆಗೆ ನಗರದ ಹೊರವಲಯದಲ್ಲಿರುವ ಅಜ್ಜಪ್ಪನಹಳ್ಳಿ ಗೇಟ್‌ನಲ್ಲಿ ಪ್ರಭಾವಿ ಮುಖಂಡರಾದ ವಡುಗೂರು ಡಿಎಲ್ ನಾಗರಾಜರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗಲಿದ್ದಾರೆ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.