ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ

ಮೈಸೂರು,ನ.10:- ಕಾಂಗ್ರೆಸ್ ನವರು ಮೊದಲಿನಿಂದಲೂ ಹಿಂದೂಗಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕೆಟ್ಟ ಸಂಸ್ಕೃತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.
ಮೈಸೂರಿನಲ್ಲಿ ಶಾಸಕ ಸತೀಶ್ ಜಾರಕಿ ಹೊಳಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ ಇದು ಕಾಂಗ್ರೆಸ್ ಪಕ್ಷದ ಕೆಟ್ಟ ಸಂಸ್ಕೃತಿ. ಮೊದಲಿನಿಂದಲೂ ಹಿಂದೂಗಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರಬರುತ್ತಿರುವುದರಿಂದ ಈ ರೀತಿ ಮಾಡುತ್ತಿದ್ದಾರೆ. ಸತೀಶ್ ಜಾರಕಿ ಹೊಳಿ ಹೇಳಿಕೆಯನ್ನು ಯಾರೂ ಒಪ್ಪಲ್ಲ, ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಿದರೆ ತಪ್ಪೇನು? ಇಂತಹವರ ಬಗ್ಗೆ ಮಾತನಾಡುವುದೇನಿದೆ ಎಂದು ಪ್ರಶ್ನಿಸಿದರು. ಹಿಂದೂ ಧರ್ಮಕ್ಕೆ ಅವಮಾನ ಮಾಡುವಂಥದ್ದು, ಹಂಗಿಸುವಂಥದ್ದು ಮಾಡುತ್ತಲೇ ಅಲ್ಪಸಂಖ್ಯಾತರ ಮತದಿಂದ ನಾವು ಶಾಶ್ವತವಾಗಿ ಖುರ್ಚಿ ಮೇಲೆ ಕುಳಿತುಕೊಳ್ಳಬಹುದು ಎಂದು ತಿಳಿದಿದ್ದರು. ಇಡೀ ದೇಶದಲ್ಲಿ ಎಲ್ಲ ಕಡೆ ಎಳೆದು ಕಾಂಗ್ರೆಸ್ ನವರನ್ನು ಹೊರಹಾಕಿದ್ದಾರೆ. ಇನ್ನೂ ಕೂಡ ಚುನಾವಣೆ ಹಿನ್ನಲೆಯಲ್ಲಿ ಈ ರೀತಿ ಹೇಳಿರುವಂಥದ್ದು. ಹಾಗಾಗಿ ಕಾಂಗ್ರೆಸ್ ನ ಚಾಳಿ ಇದು. ಹಿಂದೂಗಳನ್ನು ಅವಹೇಳನ ಮಾಡಿದರೆ ಉಳಿದವರ ಮತ ಬರುತ್ತದೆ ಎಂದು. ಜನರಿಗೆ ಗೊತ್ತಿದೆ. ಇವರು ಆಡಿದ ಮಾತನ್ನು ಯಾರಾದರೂ ಸಹಿಸಿಕೊಳ್ಳುತ್ತಾರಾ? ಎಷ್ಟು ಜಾಗೃತೆಯಿಂದ ಮಾತನಾಡಬೇಕು. ಅವರ ಮುಖಂಡರೂ ಕೂಡ ಅದನ್ನು ಖಂಡಿಸೋದಿಲ್ಲ, ಜಾರಕಿಹೊಳಿಯವರನ್ನು ಪಕ್ಷದಿಂದ ಹೊರಗೆ ಹಾಕಲಿ ನೋಡೋಣ ಎಂದು ಸವಾಲೆಸೆದರು. ರೇಣುಕಾಚಾರ್ಯ ಸಹೋದರನಪುತ್ರನ ಸಾವಿನ ಕುರಿತು ಪ್ರತಿಕ್ರಿಯಿಸಿ ಅದರ ತನಿಖೆ ನಡೆಯುತ್ತಿದೆ ಎಂದರು.
ಗುಪ್ತಚರ ಇಲಾಖೆಯ ಅಧಿಕಾರಿಯ ಕೊಲೆಯ ಕುರಿತು ಪ್ರತಿಕ್ರಿಯಿಸಿ ನಿವೃತ್ತಿ ಜೀವನವನ್ನು ಮೈಸೂರಿನಲ್ಲಿ ಕಳೆಯಲು ಇಲ್ಲಿದ್ದರು. ಅವರ ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಅವರೊಬ್ಬ ಐಬಿಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ. ಅವರ ಅಂತ್ಯ ಈ ರೀತಿಯಲ್ಲಿ ಆಗಬಾರದಿತ್ತು. ನೋವಿಗೆ ಅವರ ಜೊತೆ ಸ್ಪಂದಿಸಿದ್ದೇವೆ. ಸರ್ಕಾರದ ಸಹಾನುಭೂತಿಯನ್ನು ಹೇಳಿದ್ದೇನೆ. ಮುಂದೆ ಈ ಮನೆ ಹತ್ತಿರ ಬಂದೋಬಸ್ತ್ ಮಾಡುವ ಮೂಲಕ ರಕ್ಷಣೆ ನೀಡಲಾಗುವುದು. ಏನಾಗಿದೆ, ಯಾಕೆ ತಡವಾಯಿತು ಎಂದು ವಿಚಾರಣೆ ಮಾಡಬೇಕಾಗುತ್ತದೆ. ನ್ಯಾಯಾಲಯದ ಆದೇಶ ಕೂಡ ಇತ್ತು ಅದರಲ್ಲಿ. ನನಗೆ ಅಷ್ಟು ಮಾಹಿತಿ ಇಲ್ಲ. ಪೆÇಲೀಸರು ಸಾಕ್ಷಿ ಕಲೆ ಹಾಕಿದ್ದಾರೆ. ಅವರ್ಯಾರು ಹೊರಗೆ ಬರಲ್ಲ. ಈ ಕಾರಣಕ್ಕಾಗಿ ಯಾರನ್ನಾದರೂ ಕೊಲೆ ಮಾಡೋದಾದರೆ ಭೂಮಿ ಮೇಲೆ ಮನುಷ್ಯರೇ ಇರಲ್ಲ, ಇಂತಹ ಹಲವಾರು ಸಮಸ್ಯೆಗಳು ಎಲ್ಲ ಕಡೆನೂ ಇರತ್ತೆ. ಅದು ಕೊಲೆಯಲ್ಲಿ ಅಂತ್ಯವಾಗಬಾರದು ಎಂದರು.ನಗರದ ಟಿ.ಕೆ.ಲೇಔಟ್ ನಲ್ಲಿ ವಾಸವಿದ್ದ ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಕುಲಕರ್ಣಿ ಕೆಲವು ದಿನಗಳ ಹಿಂದಷ್ಟೇ ಕೊಲೆಯಾಗಿದ್ದು, ಅವರ ಮನೆಗೆ ಭೇಟಿ ನೀಡಿದ ಸಚಿವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.