ಕಾಂಗ್ರೆಸ್ ಕಾಲಹರಣ ಸಿಎಂ ಸಿಡಿಮಿಡಿ

ಬೆಂಗಳೂರು, ಮಾ. ೨೩- ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೂ ಕುಂಟು ನೆಪ ಹೇಳಿ ಕಾಂಗ್ರೆಸ್ ವಿಧಾನಸಭೆಯಲ್ಲಿ ಧರಣಿ ಡನೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಸದನದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಸುಮ್ಮನೆ ಕುಂಟು ನೆಪ ಹೇಳಿ ಧರಣಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ತನಿಖೆಗೂ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಇಷ್ಟಾದರೂ ಧರಣಿ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಬೇರೆ ವಿಚಾರ ಸಿಗದೆ ಇರುವುದರಿಂದ ಧರಣಿ ನಡೆಸುತ್ತಿದ್ದಾರೆ ಎಂದರು.
ಸಿಡಿಯಲ್ಲಿರುವ ಹೆಣ್ಣು ಮಗಳು ಪತ್ತೆಯಾದರೆ ಈ ಪ್ರಕರಣಕ್ಕೆ ಒಂದು ಅಂತ್ಯ ದೊರೆಯಲಿದೆ. ಆ ಹೆಣ್ಣು ಮಗಳು ಇನ್ನೂ ಸಿಕ್ಕಿಲ್ಲ. ಪತ್ತೆ ಕಾರ್ಯ ನಡೆದಿದೆ ಎಂದರು.
ಕಾಂಗ್ರೆಸ್ ಸದಸ್ಯರು ಬಜೆಟ್ ಅಧಿವೇಶನಕ್ಕೆ ಅಡ್ಡಿಪಡಿಸದೆ ಸುಗಮ ಕಲಾಪಕ್ಕೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಏನೇ ಸಮಸ್ಯೆಗಳಿದ್ದರೂ ಸದನದಲ್ಲಿ ಚರ್ಚೆ ಮಾಡೋಣ. ಸರ್ಕಾರವೂ ಉತ್ತರ ನೀಡಲು ಸಿದ್ಧವಿದೆ. ಇದು ಬಜೆಟ್ ಅಧಿವೇಶನ, ವಿವಿಧ ಇಲಾಖೆಗಳ ಬೇಡಿಕೆಗಳ ಮೇಲೂ ಚರ್ಚೆ ನಡೆಯಬೇಕಿದೆ. ಬಜೆಟ್‌ಗೂ ಸರ್ಕಾರ ಉತ್ತರ ಕೊಟ್ಟಿಲ್ಲ. ಸದನದ ಕಲಾಪಕ್ಕೆ ಅಡ್ಡಿ ಮಾಡಬೇಡಿ, ಸುಗಮ ಕಲಾಪಕ್ಕೆ ಸಹಕರಿಸಿ ಎಂದು ಅವರು ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಧರಣಿ ನಡೆಸುವುದು ಸರಿಯಲ್ಲ. ಈ ವಿಚಾರದಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನೂ ಸರ್ಕಾರ ಮಾಡಿ ತನಿಖೆಗೆ ಮುಂದಾಗಿದೆ. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಸದಸ್ಯರಿಗೆ ಕಲಾಪ ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡುತ್ತೇನೆ ಎಂದರು.