ಕಾಂಗ್ರೆಸ್ ಕಾರ್ಯಕರ್ತರ ಬೂತ್ ಮಟ್ಟದ ಸಭೆ

ತಿ.ನರಸೀಪುರ:ಜ.20:- ತಾಲೂಕಿನ ತಲಕಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಬೂತ್ ಮಟ್ಟದ ಸಭೆಯು ತಲಕಾಡಿನ ಶಿವಪಾರ್ವತಿ ಮಂಗಳ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಜಾಗೃತಗೊಳಿಸುವುದು.ಸರ್ಕಾರದ ವೈಫಲ್ಯಗಳನ್ನು ಕ್ಷೇತ್ರದ ಜನತೆಗೆ ಮನದಟ್ಟು ಮಾಡುವುದು.ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.ಅಲ್ಲದೆ ಪಕ್ಷದ ಸಂಘಟನೆ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ,ತಲಕಾಡು ಐತಿಹಾಸಿಕ ಸ್ಥಳ.ಇದನ್ನು ಒಂದು ಪ್ರವಾಸಿತಾಣವಾಗಿ ನಿರ್ಮಾಣ ಮಾಡಬೇಕಾದ ಹೊಣೆ ನನ್ನ ಮೇಲಿತ್ತು.ಆದರೆ,ಕಳೆದ ಬಾರಿಯ ಸೋಲಿನಿಂದ ಕೆಲಸ ಸಾಕಾರಗೊಳ್ಳಲಿಲ್ಲ.ತಲಕಾಡಿನಲ್ಲಿ ಒಳಚರಂಡಿ ವ್ಯವಸ್ಥೆ ,ಸುಸಜ್ಜಿತ ಪ್ರವಾಸಿ ಮಂದಿರ,ಪ್ರವಾಸಿ ಸ್ಥಳಗಳನ್ನು ನವೀನ ಮಾದರಿಯಲ್ಲಿ ಪ್ರವಾಸಿತಾಣವಾಗಿ ರೂಪಿಸುವ ಕಾರ್ಯಸೂಚಿಯನ್ನು ಮಾಡಲಾಗಿತ್ತು.ಈ ಕೆಲಸವನ್ನು ಮುಂದಿನ ಅವಧಿಯಲ್ಲಿ ಆರಂಭಿಸುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.
ಕ್ಷೇತ್ರದ ಮತದಾರರ ಬೆಂಬಲ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಉತ್ತೇಜಿಸುತ್ತದೆ.ಹಾಗಾಗಿ ಕ್ಷೇತ್ರದ ಮತದಾರ ಬಲದಿಂದಲೇ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ.
ಪ್ರಜಾಪ್ರಭುತ್ವದ ಆಶಯ ಈಡೇರಬೇಕಿದ್ದಲ್ಲಿ ದೇಶ ಸರ್ವತೋಮುಖ ಅಭಿವೃದ್ಧಿ ಕಾಣಬೇಕು.ಶಿಕ್ಷಣ,ಉದ್ಯೋಗ,ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗೆ ನಾಗರಿಕರು ಪರದಾಡುವಂತಾಗಬಾರದು.ದೇಶದ ಪ್ರತಿ ನಾಗರಿಕನ ಆರ್ಥಿಕ ಸದೃಢತೆ ಕಾಣುಬೇಕಾದಲ್ಲಿ ಹಲವು ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕಾಗುತ್ತದೆ ಎಂದರು.
ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ,ಹಲವು ಗೊಂದಲಗಳಿಂದ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪರಾಭವಗೊಂಡಿತು.ಪ್ರಸ್ತುತ ಕ್ಷೇತ್ರದಲ್ಲಿ ಕಾರ್ಯಕರ್ತರು ಮತ್ತು ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕಿದೆ ಎಂದರು
ಕಾರ್ಯಕ್ರಮದಲ್ಲಿ ತಲಕಾಡು ಗ್ರಾಪಂ ಅಧ್ಯಕ್ಷ ಕೆಂಪಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾಸಿದ್ದಶೆಟ್ಟಿ,ಮಾಜಿ ತಾಪಂ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ,ಕುಕ್ಕೂರು ಗಣೇಶ್, ಪ್ರಸ್ನನ,ನರಸಿಂಹಮಾದನಾಯಕ,ಜಯಮಾಲ, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್,ನಾಗೇಂದ್ರ, ಪಾರ್ವತಮ್ಮ ಮುಂತಾದವರು ಹಾಜರಿದ್ದರು