ಕಾಂಗ್ರೆಸ್ ಕಾರ್ಯಕರ್ತರ ಕೈ ಬಿಡುವುದಿಲ್ಲ: ಹರೀಶ್‍ಗೌಡ

ಮೈಸೂರು: ಜೂ.03:- ಕೆಲವರು ವಲಸಿಗನೆಂದು ಹೀಯಾಳಿಸಿ ವಿರೋಧಿಸಿದಾಗಿಯೂ ಅನೇಕರು ನನ್ನ ಪರವಾಗಿ ನಿಂತಿದ್ದ ಕಾರಣಕ್ಕೆ ಈ ಗೆಲುವು ಸಿಕ್ಕಿದೆ. ಹಿಂದೆಯೂ ಪಕ್ಷಕ್ಕೆ ನಿಷ್ಠನಾಗಿದ್ದೆ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಇರುತ್ತೇನೆಂದು ಶಾಸಕ ಹರೀಶ್‍ಗೌಡ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಚಾಮರಾಜ ಕ್ಷೇತ್ರದ ಕಾರ್ಯಕರ್ತರಿಗೆ ಕೃತಜ್ಞನತಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಟಿಕೆಟ್ ನೀಡುವ ವೇಳೆ ನನ್ನನ್ನು ವಲಸಿಗ ಎಂದು ಹೀಯಾಳಿಸಿದ್ದಾರೆ. ನಮ್ಮನ್ನು ವಿರೋಧಿಸುವವರು ನಾಲ್ಕು ಜನರು ಇದ್ದರೆ, ನಮ್ಮ ಪರ ನಿಂತು ಕೆಲಸ ಮಾಡುವವರು ನಾನೂರು ಜನ ಇರುತ್ತಾರೆ ಎಂಬುದನ್ನು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ನನ್ನ ಸ್ನೇಹಿತರು ಸಾಬೀತು ಮಾಡಿದ್ದಾರೆ ಎಂದರು.
ಜಾ.ದಳದಲ್ಲಿ ನಗರಾಧ್ಯಕ್ಷನಾದಾಗ ಪ್ರಾಮಾಣಿಕ, ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿದ್ದೇನೆ. 2013 ಮತ್ತು 2018ರ ಚುನಾವಣೆಯಲ್ಲಿ ನಾನೇನು ಜಾ.ದಳದಲ್ಲಿ ಟಿಕೇಟ್ ಕೇಳದೇ ಜನರೇ ಕೇಳುವಂತಾಗಿತ್ತು. ಪಕ್ಷದ ನಾಯಕರ ಸಂಬಂಧಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಬಳಿಕ ನಾಲ್ಕೂವರೆ ವರ್ಷಗಳ ಹಿಂದೆ ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಗೊಂಡೆನು. ಈ ವೇಳೆ ಕೆಲವರು ಮೂಲ-ವಲಸಿಗ ಎಂಬ ಪದಗಳನ್ನು ಮುನ್ನೆಲೆಗೆ ತಂದು ಕೆಲವರು ಹಿಯಾಳಿಸಿದರು. ನಾನು ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ನನ್ನ ಪಾಡಿಗೆ ನಾನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ ಎಂದರು.
ರಾಜಕಾರಣದಲ್ಲಿ ಅದೃಷ್ಟವೂ ಇರಬೇಕು. ನಾನು ಕಳೆದ 13 ವರ್ಷಗಳಿಂದ ಹಿಂದೆ ಶಾಸಕನಾಗುತ್ತೇನೆ ಎಂದು ಕನಸನ್ನೂ ಕಂಡಿರಲಿಲ್ಲ. ನಾವು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದರೆ, ದೇವರು ನನ್ನನ್ನು ಕೈ ಬಿಡುವುದಿಲ್ಲ ಎಂಬುದಕ್ಕೆ ಈ ಗೆಲುವು ಕೂಡ ಉದಾಹರಣೆಯಾಗಿದೆ. ನನಗೆ ಟಿಕೆಟ್ ನೀಡಿದರು ಎಂಬ ಕಾರಣಕ್ಕೆ ಕೆಲವರು ಪಕ್ಷ ತೊರೆದು ಹೋದರು. ಇನ್ನು ಕೆಲವರು ತಟಸ್ಥರಾದರು. ನಾನು ಅವರಿಗೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದೆ, ಕೇಳಲಿಲ್ಲ ಎಂದರು.
ಈ ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಶಂಕರಲಿಂಗೇಗೌಡರು ಬಿಜೆಪಿಯನ್ನು ತೊರೆದು ಜಾ.ದಳವನ್ನು ಸೇರಿದಾಗಲೂ ಅವರ ಮಡದಿ ಸೇರಿದಂತೆ ಇಡೀ ಕುಟುಂಬ ಅವರೊಂದಿಗೆ ಹೋಗದೆ, ಬಿಜೆಪಿಯಲ್ಲಿಯೇ ಉಳಿದರು. ಆದರೆ, ಅವರ ನಿಧನದ ನಂತರ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದರೆ ಬಿಜೆಪಿ ಇನ್ನೆಂತಹ ಕೆಟ್ಟ ಪಕ್ಷ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಶಂಕರಲಿಂಗೇಗೌಡ ಅವರ ಪುತ್ರ ನಗರ ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ ಸೇರಿದಂತೆ ಅವರ ಇಡೀ ಕುಟುಂಬ ಕಾಂಗ್ರೆಸ್‍ಗೆ ಸೇರಿಕೊಂಡದ್ದೂ ಕೂಡ ಪಕ್ಷಕ್ಕೆ ಬಲ ನೀಡಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ಚಾಮರಾಜ ಕ್ಷೇತ್ರದ 20 ವಾರ್ಡ್‍ಗಳ ಪೈಕಿ ಕೆಲವು ವಾರ್ಡ್‍ಗಳ ಕಾರ್ಯಕರ್ತರು, ಮುಖಂಡರು ಚುನಾವಣೆ ಸಮಯದಲ್ಲಿ ಕೈಕೊಟ್ಟರು. ಆದರೆ, ಹರೀಶ್ ಗೌಡ ಅವರು ಮಾಡಿದ್ದ ಸೇವೆ ಫಲ ನೀಡಿದೆ. ಅವರ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ಅವರ ಬೆನ್ನಿಗೆ ನಿಂತರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಾಮರಾಜ ಕ್ಷೇತ್ರದ ಚುನಾವಣಾ ವೀಕ್ಷಕ ಈಶ್ವರ ಚಕ್ಕಡಿ, ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿದರು. ಮಾಜಿ ಮೇಯರ್ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ರಾಜೇಶ್ವರಿ, ಅನಂತು, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ನಗರ ಪಾಲಿಕೆ ಮಾಜಿ ಸದಸ್ಯರಾದ ನಂದೀಶ್ ಪ್ರೀತಂ, ನಾಗಭೂಷಣ್, ಉಷಾ, ಪಕ್ಷದ ಮುಖಂಡರಾದ ಭಾಸ್ಕರ್ ಎಲ್.ಗೌಡ, ಗೋಪಿನಾಥ್, ಶಾರದ, ಶಿವಮಲ್ಲು, ಕುಮಾರ್, ಎನ್.ಆರ್.ನಾಗೇಶ್, ರವಿ, ಸೇರಿದಂತೆ ಇತರರು ಹಾಜರಿದ್ದರು.