ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಲು ಸವಾಲ್

ಚಿತ್ತಾಪುರ:ನ.15: ಸದನದಲ್ಲಿ ನಿಂತು ಸರ್ಕಾರಕ್ಕೆ ಸವಾಲೆಸೆದು ಚರ್ಚೆ ಮಾಡುವ ಶಾಸಕ ಪ್ರಿಯಾಂಕ್ ಅವರ ಬದಲಾಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರೆ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲು ಸಾಕು. ಮೊದಲು ನಮ್ಮೊಂದಿಗೆ ಚರ್ಚಿಸಿ ಗೆದ್ದು ತೋರಿಸಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಅವರು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಪಕ್ಷದ ಅರವಿಂದ ಚವಾಣ್ ಅವರು ಚರ್ಚೆಗೆ ರೆಡಿ ಇದ್ದೇವೆ ಎಂದು ಹೇಳಿಕೊಂಡು ಶಾಸಕರ ಚರ್ಚೆಯ ಪಂಥಾಹ್ವಾನ ಸ್ವೀಕರಿಸಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಅವರೊಂದಿಗೆ ಚರ್ಚೆ ನಡೆಸುವ ಸಾಮಥ್ರ್ಯ, ಪ್ರಬುದ್ಧತೆ ಇಲ್ಲದ ನಿಮ್ಮ ಚರ್ಚೆಯ ಪ್ರಶ್ನೆಗೆ ಸಾಮಾನ್ಯ ಕಾರ್ಯಕರ್ತರಾದ ನಾವೆ ಉತ್ತರಿಸುತ್ತೇವೆ. ನಾವು ಕೇಳುವ ಪ್ರಶ್ನೆಗೆ ನೀವು ಉತ್ತರಿಸಿ. ನಮ್ಮನ್ನು ಸೋಲಿಸಿ ಗೆದ್ದು ತೊರಿಸಿ. ನಂತರ ನಾವೇ ಶಾಸಕರನ್ನೆ ರೆಡಿ ಮಾಡುತ್ತೇವೆ ಎಂದು ಅವರು ಆಹ್ವಾನಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಅವರು ಶಾಸಕರಾದ ನಂತರ ಮಾಡಿರುವ ಅಭಿವೃದ್ಧಿಯನ್ನು ನಮ್ಮ ಚರ್ಚೆಯಿಂದ ತಿಳಿದುಕೊಳ್ಳಿ. ಸಚಿವರಾಗಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ, ಮಾಡಿರುವ ಅಭಿವೃದ್ಧಿಯ ಸಾಧನೆ ಅರಿವು ಮೂಡಿಸುತ್ತೇವೆ. ನಿಮ್ಮ ಬಿಜೆಪಿ ಸರ್ಕಾರದ ಸಾಧನೆ, ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆ, ಕಲಬುರಗಿ ಸಂಸದರು ಮಾಡಿರುವ ಕೆಲಸಗಳ, ಕ್ಷೇತ್ರಕ್ಕೆ ನೀವು ಮಾಡಿದ ಕೆಲಸಗಳ ಬಗ್ಗೆ ದಾಖಲೆ ಸಹಿತ ಬನ್ನಿ. ನಾವು ದಾಖಲೆ ಸಹಿತ ಬರುತ್ತೇವೆ ಚರ್ಚಿಸೋಣ ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕ್ ಅವರೊಂದಿಗೆ ಚರ್ಚೆ ನಡೆಸುವ ಆಸಕ್ತಿಯಿದ್ದರೆ ಅರವಿಂದ ಮತ್ತು ಮಣಿಕಂಠ ಅವರು, ಬಿಜೆಪಿ ಸಂಸದ ಡಾ.ಉಮೇಶ ಜಾಧವ, ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರನ್ನೆ ರೆಡಿ ಮಾಡಿಸಿ. ಕಲಬುರಗಿ ನಗರದಲ್ಲೆ ಚರ್ಚೆ ನಡೆಯಲಿ. ರಾಜ್ಯದ ಜನತೆಗೆ ಗೊತ್ತಾಗಲಿ ಚರ್ಚೆಯ ಸಂಪೂರ್ಣ ವಿಷಯ. ಇದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿದ್ದರಿದ್ದಾರೆ ಎಂದರು.