ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ

ಭಾಲ್ಕಿ:ಎ.23: ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಪಟ್ಟಣದಲ್ಲಿ ಶನಿವಾರ ಜರುಗಿದೆ. ಮಾವಿನಹಳ್ಳಿ ಗ್ರಾಮದ ಗಣೇಶ ಶಾಲಿವಾನ ಯರಬಾಗೆ(23) ಗಾಯಗೊಂಡ ಯುವಕ. ಪಟ್ಟಣದ ಇಶಾನ್ ಕಾಲೋನಿಯಲ್ಲಿ ಗಣೇಶ ಶಾಲಿವಾನ ಅವರು ಕಾಂಗ್ರೆಸ್ ಪರ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಮೂವರು ಯುವಕರು ಸೇರಿ ಗಣೇಶ ಶಾಲಿವಾನ್ ಮೇಲೆ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೈದ್ರಾಬಾದ್‍ಗೆ ಶಿಫ್ಟ್ ಮಾಡಲಾಗಿದೆ.

ಆರೋಪಿಗಳಾದ ಔರಾದ್ ಮೂಲದ ರಾಬೀನ್ ಸೂರ್ಯಕಾಂತ್, ಪಟ್ಟಣದ ನಿವಾಸಿ ಸಂಗಮೇಶ ಸ್ವಾಮಿ, ಖಟಕ್ ಚಿಂಚೋಳಿ ಗ್ರಾಮದ ಸಂಗಮೇಶ ಚನಶೆಟ್ಟಿ ಎಂಬುವರೂ ಸೇರಿ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಶಾಸಕ ಖಂಡ್ರೆ ಭೇಟಿ :

ವಿಷಯ ತಿಳಿದ ಶಾಸಕ ಈಶ್ವರ ಖಂಡ್ರೆ ಅವರು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಪಕ್ಷದ ಕಾರ್ಯಕರ್ತನ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭಯದಿಂದ ಬಿಜೆಪಿಯವರು ಈ ರೀತಿ ಗುಂಡಾವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜನರಿಗೆ ಹೆದರಿಸಿ, ಬೆದರಿಸಿ ಭಯದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಇಲ್ಲಿಯ ಬಿಜೆಪಿಗರು ಮಾಡುತ್ತಿದ್ದಾರೆ. ಚಾಕು ಇರಿದು ಕಾಂಗ್ರೆಸ್ ಕಾರ್ಯಕರ್ತನನ್ನು ಗಾಯಗೊಳಿಸಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿಸ್ಥರನ್ನು ಬಂಧಿಸಬೇಕು. ಕಾನೂನು ವ್ಯವಸ್ಥೆ ಕಾಪಾಡಬೇಕು. ಇಲ್ಲದಿದ್ದರೇ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ಸರಕಾರ, ಅಧಿಕಾರಿಗಳು ಜವಾಬ್ದಾರರು ಆಗುತ್ತಾರೆ ಎಂದು ಎಚ್ಚರಿಕೆ ನೀಡಿದರು.