ಕಾಂಗ್ರೆಸ್ ಒಡೆದ ಮನೆಯನ್ನು ಜೋಡಿಸಿಕೊಳ್ಳಲಿ: ಎಸ್.ಟಿ.ಎಸ್

ಮೈಸೂರು,ಸೆ.5:- ಕಾಂಗ್ರೆಸ್ ಒಡೆದ ಮನೆಯಾಗಿದೆ. ಮೊದಲು ಅದನ್ನು ಜೋಡಿಸಿಕೊಳ್ಳುವುದು ಒಳ್ಳೆಯದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಸಲಹೆ ನೀಡಿದರು.
ಮೈಸೂರಿನಲ್ಲಿ ಇಂದು ಸಚಿವರು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದವರು ಮೊದಲು ಅವರ ಮನೆಯ ಯಾತ್ರೆಯನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯನವರು ಒಂದು ಗುಂಪು, ಪರಮೇಶ್ವರ ಅವರದ್ದೇ ಒಂದು, ಹರಿಪ್ರಸಾದ್ ಅವರದ್ದೇ ಒಂದು ಗುಂಪು, ಖರ್ಗೆಯವರದ್ದೇ ಒಂದು ಗುಂಪು, ಕೆ.ಹೆಚ್.ಮುನಿಯಪ್ಪ ಅವರದ್ದೇ ಒಂದು ಗುಂಪು ಹೀಗೆ ನಾನಾ ಗುಂಪುಗಳಾಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಭಾರತ ಜೋಡೊ ಯಾತ್ರೆ ಮಾಡುವುದಕ್ಕಿಂತ ಮೊದಲು ಅವರ ಮನೆ ಗಳನ್ನು ಸರಿಪಡಿಸಿಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರೆ ಅನುಕೂಲವಾಗುತ್ತದೆ ಎಂಬುದು ನನ್ನ ಭಾವನೆ ಎಂದರು.
ಮನಪಾ ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ ಈಗಷ್ಟೇ ಬಂದಿದ್ದೇನೆ. ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಎಲ್ಲರೂ ಇದ್ದಾರೆ. ಇನ್ನೂ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ನಿನ್ನೆ ಮಳೆಗೆ ಎಲ್ಲೆಲ್ಲಿ ತೊಂದರೆಯಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಇನ್ನೂ ಮೇಯರ್ ಚುನಾವಣೆ ವಿಷಯ ಮಾತನಾಡಿಲ್ಲ. ನಮ್ಮ ಪಕ್ಷದ ಅಧ್ಯಕ್ಷರೂ ಕೂಡ ನನಗಿನ್ನೂ ಮಾಹಿತಿ ನೀಡಿಲ್ಲ. ಒಂದೂವರೆ ಎರಡು ಗಂಟೆಗೆ ಮಾಹಿತಿ ಕೊಡಬಹುದು. ಕೊಟ್ಟ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಮೇಯರ್ ಚುನಾವಣೆಗೆ ನಿಮ್ಮ ತೀರ್ಮಾನವೇನೂ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನನ್ನದೇನೂ ತೀರ್ಮಾನವಿಲ್ಲ, ಕಳೆದ ಬಾರಿ ಪಕ್ಷ ಏನು ಹೇಳಿತ್ತೋ ಅದನ್ನು ತೀರ್ಮಾನ ಮಾಡಿದ್ದೆವು. ಇಂದು ಇನ್ನೂ ಪಕ್ಷ ನಮಗೆ ನಿರ್ದೇಶನ ನೀಡಿಲ್ಲ. ಪಕ್ಷ ಏನು ಹೇಳಲಿದೆ ಅದರ ಪ್ರಕಾರವೇ ನಡೆದುಕೊಳ್ಳುತ್ತೇವೆ. ಪಕ್ಷದ ಉಪಾಧ್ಯಕ್ಷರು ಬಂದು ಪಾಲಿಕೆಯ ಸದಸ್ಯರಿಂದ ಮಾಹಿತಿ ಪಡೆದು ಅಧ್ಯಕ್ಷರಿಗೆ ಕೊಟ್ಟಿದ್ದಾರೆ ಅನಿಸುತ್ತದೆ. ಅಧ್ಯಕ್ಷರಿಂದ ನನಗೆ ಮಾಹಿತಿ ಬಂದಿಲ್ಲ. ಪಕ್ಷ ಏನು ಹೇಳಲಿದೆಯೋ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಆದೇಶವನ್ನು ಪಾಲಿಸುತ್ತೇನೆ ಎಂದರು.
ಜೆಡಿಎಸ್ ನಾಯಕರು ನಿಮ್ಮ ಜೊತೆ ಸಂಪರ್ಕಕ್ಕೆ ಬಂದಿದ್ದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಾ.ರಾ. ಮಹೇಶ್ ಅವರು ಏನು ನಿರ್ಧಾರ ತೆಗೆದುಕೊಂಡಿದ್ದೀರೆಂದು ದೂರವಾಣಿ ಕರೆ ಮಾಡಿದ್ದರು. ಪಕ್ಷದಿಂದ ನನಗಿನ್ನೂ ಆದೇಶ ಬಂದಿಲ್ಲ. ಪಕ್ಷದಿಂದ ನನಗೇನು ಆದೇಶ ಬರುತ್ತದೆ ಅದು ಬಂದ ತಕ್ಷಣ ನಿಮಗೆ ಮಾಹಿತಿ ನೀಡುತ್ತೇನೆ. ಪಕ್ಷದ ಅದೇಶವನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದೇನೆ ಎಂದರು.
ಕಳೆದ ವರ್ಷದ ತೀರ್ಮಾಣ ಕಳೆದ ವರ್ಷದ್ದು, ಕಳೆದ ವರ್ಷ ಪಕ್ಷ ಆದೇಶ ಮಾಡಿತ್ತು. ಈ ವರ್ಷ ಪಕ್ಷ ಇನ್ನೂ ಆದೇಶ ಮಾಡಿಲ್ಲ. ಪಕ್ಷ ಆದೇಶ ಮಾಡಲಿದೆ ಎಂದು ನಾವು ಶಾಸಕರೆಲ್ಲ ಎದುರು ನೋಡುತ್ತಿದ್ದೇವೆ. ಪಕ್ಷ ಏನೂ ಆದೇಶ ಕೊಡುತ್ತದೆಯೋ ಅದನ್ನು ಶಿರಸಾವಹಿಸಿ ಪಕ್ಷದ ಆದೇಶವನ್ನು ಪಾಲನೆ ಮಾಡುವುದಾಗಿ ತಿಳಿಸಿದರು. ಮಳೆ ಹಾನಿ, ಬೆಳೆಹಾನಿ ಕುರಿತು ಪ್ರತಿಕ್ರಿಯಿಸಿ ನಂಜನಗೂಡಿನಲ್ಲಿ ಜಾಸ್ತಿ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಬಂದಿದೆ. ಜಿಲ್ಲಾಧಿಕಾರಿಗಳಿಗೆ ತಕ್ಷಣ ಪರಿಹಾರದ ಕುರಿತು ಹೇಳಿದ್ದೇನೆ. ಕಂದಾಯ ಮಂತ್ರಿಗಳ ಜೊತೆಗೂ ಮಾತನಾಡಿ ಸಾಕಷ್ಟು ಅನುದಾನವನ್ನು ಮೈಸೂರಿಗೆ ಬಿಡುಗಡೆ ಮಾಡಬೇಕು ಎಂದು ಕೇಳಿದ್ದೇನೆ. ಇದುವರೆಗೆ ಎಲ್ಲೆಲ್ಲಿ ಡ್ಯಾಮೇಜ್ ಆಗಿದೆ. ಮನೆ ಕಳೆದುಕೊಂಡಿದ್ದಾರೆ ಅದೆಲ್ಲದಕ್ಕೂ ಕೂಡ 100% ಕ್ಲಿಯರ್ ಆಗಿದೆ. ನಿನ್ನೆ, ಮೊನ್ನೆ ಆದ ಮಳೆ ಹಾನಿಗೆ ತಕ್ಷಣ ಬಿಡುಗಡೆ ಮಾಡಲು ಹೇಳಿದ್ದೇನೆ. ಅವರೂ ಕೂಡ ಒಪ್ಪಿಕೊಂಡಿದ್ದಾರೆ. ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳಿಗೆ ನೀವು ಯಾವ ಕಾರ್ಯಕ್ರಮಕ್ಕೂ ಬರುವುದು ಬೇಡ ಈಗ ಮೈಸೂರು, ಕೆ.ಆರ್.ನಗರ ಎಲ್ಲೆಲ್ಲಿ ಡ್ಯಾಮೇಜ್ ಆಗಿದೆ ಪ್ರತಿಯೊಂದನ್ನೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಅವರು ನಂಜನಗೂಡಿಗೆ ಪ್ರಯಾಣ ಬೆಳೆಸಿದ್ದಾರೆ. ಎಲ್ಲವನ್ನೂ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ ಎಂದು ತಿಳಿಸಿದರು.