ಕಾಂಗ್ರೆಸ್ ಐದು ಗ್ಯಾರಂಟಿ ಕಾರ್ಡ್ ಗಳ ಭರವಸೆ ಈಡೇರಿಸದಿದ್ದರೆ ಹೋರಾಟ: ಆನಂದ ತೆಗನೂರ

ಕಲಬುರಗಿ:ಮೇ.30: ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಭರವಸೆಗಳನ್ನು (ಗ್ಯಾರಂಟಿ ಕಾರ್ಡ್) ತ್ವರಿತಗತಿಯಲ್ಲಿ ಈಡೇರಿಸುವ ಮೂಲಕ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಕನ್ನಡಪರ ಹೋರಾಟಗಾರ ಆನಂದ ತೆಗನೂರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಮತ್ತು ಜೆಡಿಎಸ್ ತಿರಸ್ಕರಿಸಿ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ. ಆದರೆ ಕಾಂಗ್ರೆಸ್ ನವರು ಆಡಳಿತಕ್ಕೆ 15 ದಿನಗಳಾದರೂ ಯಾವ ಗ್ಯಾರಂಟಿಯನ್ನೂ ಈಡೇರಿಸಿಲ್ಲ.ಇನ್ನೂ ಖಾತೆ ಬದಲಾವಣೆ ಅಧಿಕಾರದ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದ್ದಾರೆ.ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ನವರು ತಮ್ಮ ಕಚ್ಚಾಟ,ಆಂತರಿಕ ಕಲಹ ಕೈ ಬಿಟ್ಟು ತಮ್ಮ ಐದು ಗ್ಯಾರಂಟಿ ಕಾರ್ಡ್‍ಗಳ ಘೋಷಣೆಗಳನ್ನು ಮಾಡಬೇಕು.ಇಲ್ಲದಿದ್ದರೆ ರಾಜ್ಯದ ಜನತೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಮತ್ತು ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗುವ ಸಂಭವವಿದೆ.ಹೀಗಾಗಿ ಕಾಂಗ್ರೆಸ್ ನವರು ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮಾತಿಗೆ ಬದ್ದರಾಗಿ ನಡೆದುಕೊಳ್ಳಬೇಕು.ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.