ಕಾಂಗ್ರೆಸ್ ಋಣ ತೀರಿಸುವುದು ಪ್ರತಿಯೊಬ್ಬರ ನೈತಿಕ ಹೊಣೆಗಾರಿಕೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.07:- ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಸಚಿವರು ಪಕ್ಷದ ಕಚೇರಿ ತಾಯಿ ಇದ್ದಂತೆ. ಕೆಪಿಸಿಸಿ ಹಾಗೂ ಎಐಸಿಸಿ ನಿರ್ದೇಶನ ನೀಡಿರುವಂತೆ ಸಚಿವನಾಗಿ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿ ಸಾಂಪ್ರದಾಯಕವಾಗಿ ಕಚೇರಿಗೆ ಭೇಟಿ ಕೊಟ್ಟಿದ್ದೇನೆ ಎಂದು ಮಾತನಾಡಿದರು. ನಂತರ ಮುಂದುವರೆದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಡಿಯಲ್ಲಿ ಕರ್ನಾಟಕದಲ್ಲಿ ಒಟ್ಟು ಒಂದು ಕೋಟಿ ಇಪ್ಪತ್ತು ಲಕ್ಷ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ತಾವು ಅಧಿಕಾರಕ್ಕೆ ಬಂದು ಮೊದಲು ಮಾಡಿದ ಕೆಲಸವೇ ಪಠ್ಯಪುಸ್ತಕ ಪರಿಷ್ಕರಣೆ. ಇದು ಐತಿಹಾಸಿಕ ಮೈಲುಗಲ್ಲಾಗಿದೆ. ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಪಠ್ಯಪುಸ್ತಕದಲ್ಲಿ ಜಾತಿ ಮತ್ತು ಕೋಮುವಾದದಂತಹ ವಿಷ ಬೀಜಗಳನ್ನು ತೂರಿಸಿ ಮಕ್ಕಳಿಗೆ ಕೆಟ್ಟದ್ದನ್ನು ಹೇಳಿಕೊಡುವ ಚಾಳಿ ಬೆಳೆಸಿಕೊಂಡಿತ್ತು. ಆದರೆ ನಾವು ಸರ್ಕಾರ ರಚಿಸಿದ ಮೇಲೆ ಆ ಬಿಜೆಪಿಯ ಕೆಟ್ಟ ಚಾಳಿಯನ್ನು ಕಿತ್ತೆಸೆಯುವ ಮೊದಲ ಕೆಲಸ ಮಾಡಿರುವ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದು ನುಡಿದರು.
ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅನುದಾನವನ್ನು ಹಂಚುತ್ತಿದ್ದು ಕರ್ನಾಟಕ ರಾಜ್ಯಕ್ಕೆ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5,000 ದಿಂದ 5,500 ಕೊಡಬೇಕು. ಆದರೆ ಈಗಿನ ದುರಾಡಳಿತದ ಕೇಂದ್ರ ಬಿಜೆಪಿ ಸರ್ಕಾರ ಪ್ರತಿ ಮಗುವಿಗೆ 2,400 ಗಳು ಮಾತ್ರ ಕೊಡುತ್ತಿದ್ದು ಇದು ಶಾಲಾ ಮಕ್ಕಳಿಗೆ ಮಾಡುತ್ತಿರುವ ಬಹುದೊಡ್ಡ ಅನ್ಯಾಯವಾಗಿದೆ.
ನಮ್ಮ ಶಾಲಾ ಮಕ್ಕಳಿಗೆ ದೊರೆಯಬೇಕಾದ ಅನುದಾನದ ಪಾಲನ್ನು ಕೇಳಲು ನಾವು ದೆಹಲಿಗೆ ತೆರಳಿ ಪ್ರತಿಭಟನೆ ಮಾಡಿ ನಮ್ಮ ಹಕ್ಕುಗಳನ್ನು ಒತ್ತಾಯ ಮಾಡುವ ನಿರ್ಧಾರವನ್ನು ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಮುಖ್ಯಮಂತ್ರಿಗಳಾಗಿದ್ದ ನಮ್ಮ ತಂದೆಯವರಾದ ಬಂಗಾರಪ್ಪನವರು ಆರಾಧನಾ ಯೋಜನೆಯನ್ನು ಜಾರಿಗೆ ತಂದು ಪ್ರತಿ ಗ್ರಾಮಗಳಲ್ಲಿ ಇರುವ ದೇವರುಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಆದರೆ ಈಗ ಪ್ರಸ್ತುತ ಬಿಜೆಪಿ ಸರ್ಕಾರ ರಾಮನ ಹೆಸರನ್ನು ಹೇಳಿಕೊಂಡು ರಾಮನನ್ನು ಬೀದಿಗೆ ತಂದು ಮತಕ್ಕೆ ಮಾತ್ರ ರಾಮ ನಾಮ ಜಪ ಮಾಡುತ್ತಿದ್ದಾರೆ.
ಬಿಜೆಪಿಯವರು ಮೊದಲಿನಿಂದಲೂ ಸಂವಿಧಾನ ವಿರೋಧಿ ನಡವಳಿಕೆಗಳನ್ನು ಪ್ರಚೋದಿಸುತ್ತ ಕಾನೂನು ಉಲ್ಲಂಘನೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ನೆಲದ ಕಾನೂನು ಎಂದಿಗೂ ಸಾರ್ವಭೌಮ ಅದೇ ಮೆರೆಯಬೇಕು ಎಂಬುದು ಕಾಂಗ್ರೆಸ್ನ ಸಿದ್ಧಾಂತ. ಡಾ.ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಗೌರವಿಸಿಕೊಂಡು ಹೋದರೆ ಮಾತ್ರ ದೇಶ ಪ್ರಗತಿಯ ಕಡೆಗೆ ಸಾಗುವುದು. ಹಾಗಾಗಿ ನಮ್ಮ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯದ ಪ್ರತಿ ಶಾಲೆಗಳಲ್ಲೂ ಸಂವಿಧಾನ ಪೀಠಿಕೆಯನ್ನು ಓದಲೇಬೇಕು ಎಂಬ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದ್ದೇವೆ ಎಂದು ನುಡಿದರು. ಮುಂದುವರೆದು ಪಕ್ಷ ಸಂಘಟನೆ ಮಾಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪಕ್ಷದ ಜೀವಾಳ ನಮ್ಮ ಕಾರ್ಯಕರ್ತರು. ಅವರ ಕುಂದು ಕೊರತೆ ಮತ್ತು ಅಹವಾಲುಗಳನ್ನು ನಾವು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂದುವರೆದು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಮತ್ತು ಇಡೀ ಭಾರತ ಕಂಡ ಧೀಮಂತ ನಾಯಕ ಬಂಗಾರಪ್ಪನವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ ಎಂದು ಬಣ್ಣಿಸಿದರು. ಅವರು ನೀಡಿದ ಆಶ್ರಯ, ಆರಾಧನಾ ಯೋಜನೆಗಳನ್ನು ಪಡೆದುಕೊಳ್ಳದವರೇ ಇಲ್ಲ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು. ಅವರ ಹಾದಿಯಲ್ಲಿ ಮಧು ಬಂಗಾರಪ್ಪನವರು ಪ್ರಥಮ ಆಯ್ಕೆಯಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಸ್ತುತ ಯುವ ರಾಜಕಾರಣಿಗಳಿಗೆ ಪೂರ್ತಿಯಾಗಿದೆ ಎಂದು ನುಡಿದರು.
ಕಾಂಗ್ರೆಸ್ ಭವನದ ಮುಖಂಡರ ಸಭೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಓಬಿಸಿ ಘಟಕದ ನಗರ ಸಮಿತಿ ಅಧ್ಯಕ್ಷ ನಾಗೇಶ್ ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಮಾರುತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಲತಾ ಸಿದ ಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮಾಜಿ ಮೇಯರ್ ಮೋದಮಣಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಶಾಮ ಯೋಗೀಶ್, ಅನಂತು , ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಎಂ ಶಿವಣ್ಣ, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಗಿರೀಶ್ , ಹುಣಸೂರು ಬಸವಣ್ಣ, ನಗರಬಾದ್ ನಟರಾಜ್, ಅನಿಲ್ ನಾರಾಯಣ್, ಜೆ.ಜೆ.ಆನಂದ್, ಗುರು ಮಲ್ಲೇಶ್, ಲಕ್ಷ್ಮಣ್, ಸಿದ್ದರಾಜು ರೇವಣ್ಣ, ಜಮೀರ್, ರವಿ, ಅನಿಲ್ ನಾರಾಯಣ್, ಕಾಂತರಾಜ್ ಇತರರು ಭಾಗವಹಿಸಿದ್ದರು.