ಕಾಂಗ್ರೆಸ್ ಆರೋಪಗಳು ಸೋಲಿನ ಹತಾಶೆಯದ್ದು: ಶೆಟ್ಟರ್


ಹುಬ್ಬಳ್ಳಿ, ನ 21: ಕಾಂಗ್ರೆಸ್ ಯಾವಾಗಲೂ ಸೋಲಿನ ಹತಾಶೆಯಿಂದ ಬಿಜೆಪಿಯ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುತ್ತಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಸೋಲಿನ ಹತಾಶೆಗೆ ಒಳಗಾದಂತಿರುವ ಕಾಂಗ್ರೆಸ್ ಆರೋಪಗಳನ್ನು ಮಾಡುವುದರಲ್ಲಿಯೇ ನಿರತವಾಗಿದೆ ಎಂದು ನುಡಿದರು.
ಮಂಗಳೂರು ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣದ ಕುರಿತಂತೆ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನಿಖೆ ನಡೆಸುತ್ತಿದ್ದು, ಇದು ಗುಪ್ತಚರ ಇಲಾಖೆಯ ವೈಫಲ್ಯ ಎಂಬ ಆರೋಪ ಶುದ್ಧ ಸುಳ್ಳು ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಚಿಲುಮೆ ಸಂಸ್ಥೆಯ ತನಿಖೆ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಮುಖ್ಯಮಂತ್ರಿಗಳು ಈಗಾಗಲೇ ಇದರ ಕುರಿತಾದ ತನಿಖೆಯ ಆದೇಶ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ತಾವು ಹೆಚ್ಚೇನೂ ಹೇಳುವುದಿಲ್ಲ ಎಂದಷ್ಟೇ ಶೆಟ್ಟರ್ ನುಡಿದರು.