ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ಉಚ್ಛ ನ್ಯಾಯಾಲಯ:ಮಾ.23ರಂದು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ

ಕಲಬುರಗಿ:ಮಾ.22: ಮಹಾನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾಂಗ್ರೆಸ್ ಅರ್ಜಿಯನ್ನು ಇಲ್ಲಿನ ಉಚ್ಛ ನ್ಯಾಯಾಲಯವು ವಜಾಗೊಳಿಸಿ ವಿಚಾರಣೆಯನ್ನು ಮುಂದೂಡಿದೆ. ಹೀಗಾಗಿ ಮಾರ್ಚ್ 23ರಂದು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಜರುಗಲಿದೆ. ಇದರಿಂದಾಗಿ ನಿಗದಿಯಂತೆ ಒಂದೂವರೆ ವರ್ಷದ ಬಳಿಕ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನೆರವೇರಲಿದೆ.
ಬಿಜೆಪಿಯ ನಾಮ ನಿರ್ದೇಶಿತ ರಾಜ್ಯ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಮತ್ತು ನಾಮ ನಿರ್ದೇಶಿತ ಪರಿಷತ್ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ವರ್ಷಾ ಜಾನೆ ಅವರು ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಂಗಳವಾರ ಅರ್ಜಿ ವಿಚಾರಣೆ ಮಾಡಿದ ಉಚ್ಛ ನ್ಯಾಯಾಲಯವು ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ಕೊಡದೇ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಮಹಾನಗರ ಪಾಲಿಕೆಯು ಒಟ್ಟು 55 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ 28 ಸ್ಥಾನಗಳನ್ನು, ಬಿಜೆಪಿ 22 ಸ್ಥಾನಗಳನ್ನು, ಜೆಡಿಎಸ್ ನಾಲ್ಕು ಸ್ಥಾನಗಳನ್ನು ಹೊಂದಿದೆ. ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸಿ ಪಾಲಿಕೆ ಚುಕ್ಕಾಣೆ ಹಿಡಿಯಲು ಬಿಜೆಪಿ ಬೇರೆ ಭಾಗದ ಕೆಲ ರಾಜ್ಯ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮತ್ತು ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವಿಳಂಬವಾಗಿತ್ತು. ಅರ್ಜಿ ವಿಚಾರಣೆ ಮಾಡಿದ ಉಚ್ಛ ನ್ಯಾಯಾಲಯವು ಇತ್ತೀಚೆಗೆ ಆರು ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಮಾಡಲು ಅನುಮತಿ ನೀಡಿತ್ತು. ಪ್ರಕರಣ ಇತ್ಯರ್ಥ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಮೇಯರ್, ಉಪ ಮೇಯರ್ ಚುನಾವಣೆ ನಿಗದಿಯಾಗಿತ್ತು. ಆದಾಗ್ಯೂ, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯೆ ವರ್ಷಾ ಜಾನೆ ಅವರು ನಾಮನಿರ್ದೇಶಿತ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎನ್ನುವ ದೆಹಲಿ ಪಾಲಿಕೆ ಚುನಾವಣೆ ಸಂದರ್ಭದ ತೀರ್ಪು ಉಲ್ಲೇಖಿಸಿ ಮತ್ತೆ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ಮಾಡಿರುವ ಉಚ್ಛ ನ್ಯಾಯಾಲಯವು ಚುನಾವಣೆ ತಡೆಯಾಜ್ಞೆಗೆ ನಿರಾಕರಿಸಿದೆ. ಅರ್ಜಿ ವಿಚಾರಣೆ ಮುಂದೂಡಿದೆ. ಹೀಗಾಗಿ ಮಾರ್ಚ್ 23ರಂದು ನಿಗದಿಯಂತೆ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಜರುಗಲಿದೆ. ಪಾಲಿಕೆ ಗದ್ದುಗೆ ಏರಲು 36 ಸದಸ್ಯ ಬಲ ಬೇಕಿದ್ದು, ಬಹುಮತ ಸಾಬೀತುಪಡಿಸಿ ಮಹಾನಗರ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ಮಾಡುತ್ತಿವೆ.
ಇನ್ನು ನಾಲ್ವರು ಸದಸ್ಯರನ್ನು ಹೊಂದಿರುವ ಜಾತ್ಯಾತೀತ ಜನತಾದಳವು ಕಿಂಗ್ ಮೇಕರ್ ಸ್ಥಾನದಲ್ಲಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆಯೋ ಆ ಪಕ್ಷ ಪಾಲಿಕೆಯ ಚುಕ್ಕಾಣೆಯನ್ನು ಹಿಡಿಯಲಿದೆ. ಆದಾಗ್ಯೂ, ಜೆಡಿಎಸ್ ತಾನೇ ಮೇಯರ್ ಸ್ಥಾನ ಕೇಳುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿಯು ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಕಾಂಗ್ರೆಸ್ಸಿನವರು ಜೆಡಿಎಸ್ ನಮಗೆ ಬೆಂಬಲ ಕೊಡುತ್ತದೆ ಎಂದು ಹೇಳಿದರೆ, ಬಿಜೆಪಿ ನಮಗೆ ಬೆಂಬಲ ಕೊಡುತ್ತದೆ ಎಂದು ಹೇಳುತ್ತಿದೆ. ಹೀಗಾಗಿ ಇಡೀ ಚುನಾವಣೆ ಪ್ರಕ್ರಿಯೆ ತೀವ್ರ ಕುತೂಹಲವನ್ನು ಹುಟ್ಟಿಸಿದೆ.
ನಿಷೇಧಾಜ್ಞೆ ಜಾರಿ: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ನಗರದ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ಸುತ್ತಮುತ್ತ 200 ಮೀಟರ್‍ವರೆಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಉಪ ಪೋಲಿಸ್ ಆಯುಕ್ತ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಐಪಿಎಸ್ ಅಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ 85 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಿದೆ. ಮೆರವಣಿಗೆ, ಪ್ರತಿಭಟನೆ ಮತ್ತು ಸಭೆಗಳನ್ನು ಮಾಡುವುದನ್ನು, ಶಸ್ತ್ರಾಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳನ್ನು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.