ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.20: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯತಿಯ ಕೆಲವು ಹಾಲಿ ಬಿಜೆಪಿ ಬೆಂಬಲಿತ ಸದಸ್ಯರು ಬಿಜೆಪಿ ಪಕ್ಷ ತೊರೆದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಮುಖಂಡ ಬಿ.ಎಲ್.ದೇವರಾಜು ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗ್ರಾಮ ಮುಖಂಡರನ್ನು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅನ್ಯ ಪಕ್ಷದ ಮುಖಂಡರ ಆಗಮನದಿಂದ ಅಕ್ಕಿಹೆಬ್ಬಾಳು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ವೃದ್ದಿಸಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಗೆಲುವು ನಿಶ್ಚಿತ ಎಂದರು. ದೇಶದ ಅಭಿವೃದ್ದಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ದೇಶದಲ್ಲಿ ಹಸಿರು ಕ್ರಾಂತಿಯ ಮೂಲಕ ಆಹಾರ ಭದ್ರತೆಗೆ ಒತ್ತು ನೀಡಿದವರು ಕಾಂಗ್ರೆಸ್ಸಿಗರು. ದೊಡ್ಡ ಅಣೆಕಟ್ಟೆಗಳನ್ನು ನಿರ್ಮಿಸಿ ಬರಡು ಭೂಮಿಯನ್ನು ನೀರಾವರಿಗೆ ಒಳಪಡಿಸಿದವರು ಕಾಂಗ್ರೆಸ್ಸಿಗರು. ದೂರ ಸಂಪರ್ಕ, ಅಣುಶಕ್ತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ದೇಶದ ಪ್ರಗತಿಗೆ ಅಡಿಪಾಯ ಹಾಕಿದವರು ಕಾಂಗ್ರೆಸ್ಸಿಗರು. ಇದರ ಅರಿವಿಲ್ಲದ ಕೆಲವರು ಮೋದಿ ಮೋದಿ ಎನ್ನುತ್ತಿದ್ದಾರೆ. ಧರ್ಮಕ್ಕಿಂತ ಬದುಕು ಮುಖ್ಯ. ದೇಶದ ಬಡವರಿಗಾಗಿ ಕಾಂಗ್ರೆಸ್ ಹಿಂದಿನಿಂದಲೂ ಕೆಲಸ ಮಾಡುತ್ತಿದೆ. ಈಗಲೂ ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೂಲಕ ಬಡವರ ಬದುಕಿಗೆ ಆಸರೆಯಾಗಿದೆ. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವವರೆಲ್ಲರಿಗೂ ನಮ್ಮ ಪಕ್ಷದ ಬಾಗಿಲು ತೆಗೆದಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್, ಜಲೇಂದ್ರ, ರಾಜು, ಕುಮಾರೇಗೌಡ, ಪ್ರತೀಪ, ರಾಘು, ಮನು, ಸಾಗರ್,ರಾಜೇಗೌಡ, ಮಂಜಶೆಟ್ಟಿ, ಮನೋಹರ, ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಗ್ರಾ.ಪಂ ಮಾಜಿ ಸದಸ್ಯರಾದ ವಾಯಿದ್ ಖಾನ್, ಕಿಟ್ಟಣ್ಣ, ವೆಂಕಟಪ್ಪ, ಟಿ.ಕೃಷ್ಣ, ಆರ್.ಶ್ರೀನಿವಾಸ್, ಕೃಷ್ಣೇಗೌಡ, ರಾಜನಾಯಕ್, ಚಿಕ್ಕಯ್ಯ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.