ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‍ಗೆ ಭರ್ಜರಿ ಗೆಲುವು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.05-ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರು ಭಾರತೀಯಜನತಾ ಪಾರ್ಟಿಅಭ್ಯರ್ಥಿ ಎಸ್. ಬಾಲರಾಜು ಅವರ ವಿರುದ್ದ 1,88,706 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನಿನ್ನೆ ತಾಲ್ಲೂಕಿನ ಬೇಡರಪುರ ಬಳಿ ಇರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತಎಣಿಕೆಯಲ್ಲಿ ಸುನಿಲ್ ಬೋಸ್‍ರವರು 7,51,671 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿಜಯ ಸಾಧಿಸಿದ್ದಾರೆ.
ಸುನಿಲ್ ಬೋಸ್‍ರವರ ಪ್ರಬಲ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಅವರು 5,62,965 ಮತಗಳನ್ನು ಪಡೆದಿದ್ದರೆ, ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ಎಂ. ಕೃಷ್ಣಮೂರ್ತಿ 15,903, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ. ಕೃಷ್ಣ 8,089, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ನಿಂಗರಾಜು. ಎಸ್ 1,411, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನಕುಮಾರ್. ಬಿ 978, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಕಂದಳ್ಳಿ ಮಹೇಶ್ 1,252, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಸುಮ. ಎಸ್. 3,826 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಕದಂಬ ನಾ. ಅಂಬರೀಷ್ 1,743, ನಿಂಗರಾಜು ಜಿ. 1,247, ಪಟಾಸ್ ಪ್ರದೀಪ್‍ಕುಮಾರ್.ಎಂ 1,986, ಮಹದೇವಸ್ವಾಮಿ. ಬಿ.ಎಂ (ಪಂಪಿ) 3,421, ಜಿ.ಡಿ. ರಾಜಗೋಪಾಲ (ಹೆಚ್.ಡಿ.ಕೋಟೆ) 3,954, ಹೆಚ್.ಕೆ. ಸ್ವಾಮಿ ಹರದನಹಳ್ಳಿ ಅವರು 3,208 ಮತ ಪಡೆದಿದ್ದಾರೆ. ನೋಟಾಗೆ 8,143 ಮತಗಳು ಚಲಾವಣೆಯಾಗಿವೆ.
ಲೋಕಸಭೆ ಚುನಾವಣೆಯ ಮತ ಎಣಿಕೆಯ ಆರಂಭದಿಂದಲೂ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅಂತಿಮವಾಗಿ ಜಯಭೇರಿ ಬಾರಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಮತ್ತು ಮೈಸೂರು ಜಿಲ್ಲೆಯ ಟಿ.ನರಸೀಪುರ, ವರುಣ, ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ಬರಲಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗೆ ಲೀಡ್ ತಂದುಕೊಟ್ಟರೆ, ಟಿ.ನರಸೀಪುರದಲ್ಲಿ ಮಾತ್ರ ಅಲ್ಪ ಲೀಡ್ ಪಡೆದಿದ್ದಾರೆ.
ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1ನೇ ಸುತ್ತಿನಿಂದ 7ನೇ ಸುತ್ತಿನ ತನಕವೂ ನಿರಂತರ ಮುನ್ನಡೆ ಹೊಂದಿದ್ದರು. ಅದಾದ ಬಳಿಕವೂ, ಸುನೀಲ್ ಬೋಸ್ 76,722 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಬಾಲರಾಜು 73,801 ಮತಗಳನ್ನು ಪಡೆದುಕೊಂಡರು. ಹೀಗಾಗಿ ಇಲ್ಲಿ 2921 ಮತಗಳ ಲೀಡ್ ಪಡೆದಿದ್ದಾರೆ. ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸುನೀಲ್ ಬೋಸ್ ಅವರಿಗೆ ತವರಿನಲ್ಲೇ ಅಲ್ಪ ಲೀಡ್ ಬಂದಿದ್ದರಿಂದ ಮುಜುಗರ ಅನುಭವಿಸಿದ್ದಾರೆ.
ಸಿಎಂ ಕ್ಷೇತ್ರದಲ್ಲಿ 33 ಸಾವಿರ ಲೀಡ್: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಕವಾಗಿ ಕೈ-ಕಮಲದ ನಡುವೆ ಟೈಟ್ ಫೈಟ್ ನಡೆದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗೆ 33,352 ಲೀಡ್ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ 73,852 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 1,07,203 ಮತ ಪಡೆದುಕೊಂಡರು.
ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಾಲರಾಜ್‍ಗೆ 72,997 ಮತಗಳು ಬಂದಿದ್ದು, ಸುನೀಲ್ ಬೋಸ್‍ಗೆ 96,735 ಮತ ಸಿಕ್ಕಿದ್ದು 23,738 ಲೀಡ್ ದೊರೆತಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 20,578 ಲೀಡ್, ಜೆಡಿಎಸ್ ಶಾಸಕ ಇರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೈಗೆ 36,957 ಲೀಡ್, ಕೊಳ್ಳೇಗಾಲದಲ್ಲಿ 33,016 ಲೀಡ್, ಗುಂಡ್ಲುಪೇಟೆಯಲ್ಲಿ 17,982 ಲೀಡ್ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 20,326 ಮತಗಳು ಲೀಡ್ ಕೊಟ್ಟಿವೆ.
8 ವಿಧಾನಸಭಾ ಕ್ಷೇತ್ರಗಳಲ್ಲಿ ಟಿ.ನರಸೀಪುರ ಹೊರತುಪಡಿಸಿ ಉಳಿದೆಲ್ಲೆಡೆ ಭರ್ಜರಿ ಮತಗಳು ಕೈ ಬುಟ್ಟಿಗೆ ಬಂದಿವೆ. ಇವಿಎಂ ಮತ ಎಣಿಕೆ ಅಂಕಿ ಅಂಶಗಳು ಇದಾಗಿದ್ದು, ಅಂಚೆ ಮತ ಪತ್ರದ ಲೆಕ್ಕ ಇನ್ನμÉ್ಟೀ ತಿಳಿದುಬರಬೇಕಿದೆ. ಕಾಂಗ್ರೆಸ್‍ನ ಸುನೀಲ್ ಬೋಸ್ ಸಮೀಪದ ಪ್ರತಿಸ್ಪರ್ಧಿ ಬಾಲರಾಜು ವಿರುದ್ಧ 1,88,943 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಸುನೀಲ್ ಬೋಸ್ ಪ್ರತಿಕ್ರಿಯೆ: ಎಲ್ಲಾ ಕ್ಷೇತ್ರದಲ್ಲೂ ಲೀಡ್ ಬಂದು ತವರಿನಲ್ಲೇ ಕಡಿಮೆ ಲೀಡ್ ಬಂದಿರುವ ಕುರಿತು ಸುನೀಲ್ ಬೋಸ್ ಮಾತನಾಡಿ, ಎಲ್ಲಾ 8 ಕ್ಷೇತ್ರಗಳಲ್ಲೂ ತನ್ನದೇ ಆದ ರಾಜಕೀಯ ಕಾರಣಗಳಿರುತ್ತವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಂತೆ ಮಾಡುತ್ತೇನೆ ಎಂದರು.
ವಿರೋಧಿಗಳು ಗೋ ಬ್ಯಾಕ್ ಎಂದು ಘೋಷಣೆ ಕೂಗಿಸಿದ್ದರು. ಆದರೆ, ಮತದಾರರು ಕಮ್ ಇನ್ ಎಂದಿದ್ದಾರೆ. ಶೀಘ್ರದಲ್ಲೇ ಚಾಮರಾಜನಗರದಲ್ಲಿ ಮನೆ ಮಾಡುತ್ತೇನೆ. ಕಾಂಗ್ರೆಸ್‍ನ ಶಾಸಕರು, ಮುಖಂಡರು ತಾವೇ ಚುನಾವಣೆಗೆ ನಿಂತಂತೆ ಓಡಾಡಿ ಈ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಪುನಃ ಕಾಂಗ್ರೆಸ್‍ತೆಕ್ಕೆಗೆ ಮೀಸಲು ಕ್ಷೇತ್ರ : ಸುನಿಲ್ ಬೋಸ್‍ರವರು ಜಯಗಳಿಸುವ ಮೂಲಕ ಕಳೆದ ಬಾರಿ ಕೈ ತಪ್ಪಿಹೋಗಿದ್ದ ಚಾಮರಾಜನಗರ ಮೀಸಲು ಕ್ಷೇತ್ರವನ್ನು ಪುನಃ ಕಾಂಗ್ರೆಸ್ ತೆಕ್ಕೆಗೆ ಮರಳಿ ಪಡೆದಂತಾಗಿದೆ. ಕಳೆದ ಬಾರಿ ಶ್ರೀನಿವಾಸ್‍ಪ್ರಸಾದ್ ಕಾಂಗ್ರೆಸ್‍ನ ಆರ್. ಧೃವನಾರಾಯಣರವರನ್ನು ಸೋಲಿಸುವುದರ ಮೂಲಕ ಕ್ಷೇತ್ರದಲ್ಲಿ ಪ್ರಥಮ ಬಾರಿ ಕಮಲ ಅರಳಿಸಿದ್ದರು.
ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಬಲ ನಾಯಕ ವಿ. ಶ್ರೀನಿವಾಸ್‍ಪ್ರಸಾದ್ ಅವರು ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್‍ನಿಂದ ಕಸಿದು ಕೊಂಡಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್‍ಬೋಸ್ ಹಿಂದೆ ಅವರ ತಂದೆ ಸಚಿವ ಮಹದೇವಪ್ಪರವರ ಬೆಂಬಲ ಹಾಗೂ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯರವರೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಭರ್ಜರಿ ಗೆಲವು ಸಾಧಿಸಿದ್ದಾರೆ.
ಆದರೆ ಎಸ್. ಬಾಲರಾಜುರವರು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗುರುತಿಸಿಕೊಂಡಿದ್ದರು. ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಷ್ಟೊಂದು ಚಿರಪರಿಚಿತರಲ್ಲದ್ದರಿಂದಲೂ ಹಾಗೂ ಪಕ್ಷದ ಪ್ರಮುಖ ನಾಯಕರ ಬೆಂಬಲದ ಕೊರತೆಯಿಂದಲೂ ಸಹ ಸೋಲನ್ನು ಅನುಭವಿಸಿದ್ದಾರೆ.
ಅಪ್ಪ ಸೋತ ಕ್ಷೇತ್ರದಲ್ಲಿ ಮಗ ಜಯಭೇರಿ : ಈ ಹಿಂದೆ 1991 ರಲ್ಲಿ ಡಾ.ಎಚ್. ಸಿ. ಮಹಾದೇವಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಈಗ, ಅದೇ ಕ್ಷೇತ್ರದಲ್ಲಿ ಅವರ ಪುತ್ರ ಸುನಿಲ್ ಬೋಸ್ ವಿಜಯ ಪತಾಕೆ ಹಾರಿಸಿದ್ದು ಮೊದಲ ಚುನಾವಣೆಯಲ್ಲಿ ಗೆದ್ದು ಸಂಸತ್‍ಗೆ ಹಾರಿದ್ದಾರೆ.
ಒಟ್ಟಾರೆ ಸುನಿಲ್‍ಬೋಸ್ ಜಯಗಳಿಸುವ ಮೂಲಕ ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.