ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸಿ: ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.29:- ಸಮಾಜ ತಿದ್ದುವಂತಹ ಶಕ್ತಿ ಇರುವ ಶಿಕ್ಷಕ ವರ್ಗ ಬೇರೆಯವರು ನೀಡುವ ಆಸೆ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಸಮಸ್ಯೆ ಪರಿಹರಿಸುವ, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸಿ ಎಂದು ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ ಮನವಿ ಮಾಡಿದರು.
ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ಎಂದರೆ ಅದಕ್ಕೆ ಕಾರಣ ಶಿಕ್ಷಕರು. ಆದರೆ, ಶಿಕ್ಷಕರ ಸಮಸ್ಯೆಗಳೇ ಬಹಳಷ್ಟಿವೆ. ಇಂತಹ ಸಂಧರ್ಭದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲ, 24 ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ಕೆಲಸ ಮಾಡಿರುವ ಮರಿತಿಬ್ಬೇಗೌಡರನ್ನು ಗೆಲ್ಲಿಸಿದರೆ ಶಿಕ್ಷಕರು ಸಮಸ್ಯೆಗೆ ಪರಿಹಾರ ಸಿಗಲಿದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ, ರೈತರಿಗೆ ಬಹಳಷ್ಟು ಕೊಡುಗೆ ನೀಡಿದೆ. ಸಿದ್ದರಾಮಯ್ಯನವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಮರಿತಿಬ್ಬೇಗೌಡರನ್ನು ಗೆಲ್ಲಿಸಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿ ಎಂದು ಕೋರಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ಗುರುಗಳ ಸ್ಥಾನ ಅತ್ಯಂತ ಗೌರವಯುತವಾದುದು. ಕಳಂಕ ಇಲ್ಲದೆ, ಭ್ರಷ್ಟಾಚಾರದ ನಂಟಿಲ್ಲದ ಅಭ್ಯರ್ಥಿ ಮರಿತಿಬ್ಬೇಗೌಡರು ನಿರಂತರವಾಗಿ ಶಿಕ್ಷಕರ ಮಧ್ಯೆ ಇದ್ದು ಶಿಕ್ಷಕರ ಸಮಸ್ಯೆಗಳನ್ನು ತಿಳಿದು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಸೇವೆಗಳೇ ಅವರಿಗೆ ಶ್ರೀರಕ್ಷೆ. ಕೋಮುವಾದ ಮನುವಾದವನ್ನು ಈ ಸಮಾಜಕ್ಕೆ ಏರುವಂತಹ ಸಂವಿಧಾನ ವಿರೋಧಿ ಬಿಜೆಪಿಯನ್ನು ಕಿತ್ತೊಗೆಯಬೇಕು. ಅಂತಹ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸದಾ ಹಿಂದುಳಿದವರು, ಶೋಷಿತರ ಧ್ವನಿಯಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರ ಕೈ ಬಲಪಡಿಸಿ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತ ನೀಡಿ ಸಮಾಜದ ಪ್ರಗತಿಗೆ ಸಾಕ್ಷಿಯಾಗಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಶಿವಣ್ಣ ಮಾತನಾಡಿ, ಈ ಬಾರಿ ಎಸ್ಸಿ, ಎಸ್ಟಿ ವರ್ಗಕ್ಕೆ ಸೇರುವ ಶಿಕ್ಷಕರು ಖಂಡಿತವಾಗಿಯೂ ನೂರಕ್ಕೆ ನೂರು ಕಾಂಗ್ರೆಸ್‍ಗೆ ಮತ ನೀಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. 4 ಭಾರಿ ಪರಿಷತ್ ಸದಸ್ಯರಾಗಿರುವ ಮರಿತಿಬ್ಬೇಗೌಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದೆ. ಶಿಕ್ಷಕರು, ಶಿಕ್ಷಣ ಕ್ಷೇತ್ರದ ಬಗೆಗೆ ಅವರಿಗಿರುವ ಕಾಳಜಿಯೇ ವರದಾನವಾಗಲಿದೆ. ಅವರು ಮತ್ತೊಮ್ಮೆ ಆಯ್ಕೆಯಾದರೆ ಶಿಕ್ಷಣ ಕ್ಷೇತ್ರಕ್ಕೆ ಗೌರವವೂ ಹೆಚ್ಚುತ್ತದೆ ಎಂದು ತಿಳಿಸಿದರು.
ಅಭ್ಯರ್ಥಿ ಮರಿತಿಬ್ಬೇಗೌಡ ಮಾತನಾಡಿ, ಇಂದು ಚುನಾವಣೆಯಷ್ಟೇ ನಮ್ಮ ಬದುಕಿನ ಅಳಿವು ಉಳಿವಿನ ಬಗ್ಗೆ ತೀರ್ಮಾನಿಸುವ ಪರ್ವ ಕಾಲದಲ್ಲಿ ನಾವಿದ್ದೇವೆ. ಅಂಬೇಡ್ಕರ್ ಹೇಳಿದಂತೆ ಶಾಲೆಗಳಲ್ಲಿ ಘಂಟೆ ಹೆಚ್ಚು ಬಾರಿಸಿದರೆ ಶಿಕ್ಷಣ ಕ್ರಾಂತಿಯಾಗುತ್ತದೆ. ದೇವಸ್ಥಾನಗಳಲ್ಲಿ ಹೆಚ್ಚು ಘಂಟೆ ಬಾರಿಸಿದರೆ ಮೌಢ್ಯ ಹೆಚ್ಚಾದಂತೆ ಆಗುತ್ತದೆ. ಶೇ.60 ಕಾರ್ಮಿಕರಿಗೆ ಶಕ್ತಿ ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕು ಸಿಕ್ಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವಾ ಭದ್ರತೆ ಕೊರತೆ ಕಾಣುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಬಹಳಷ್ಟು ಖಾಲಿ ಇವೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಕಷ್ಟದಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮಕ್ಕಳಿಗೆ ಶಿಕ್ಷಣ ಕೊಡಲು ಹೇಗೆ ಸಾಧ್ಯ? ಈ ಸಮಸ್ಯೆಗಳನ್ನು ನಾನು ಶಾಸನ ಸಭೆಯಲ್ಲಿ ಚರ್ಚೆಗೆ ತಂದಿದ್ದೇನೆ. ಮುಂದೆಯೂ ತರಲಿದ್ದೇನೆ. ಹೀಗಾಗಿ ಮತ್ತೊಮ್ಮೆ ಮರದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮಾಜಿ ಮುಡಾ ಸದಸ್ಯ ಶಿವಕುಮಾರ್, ಮಾಜಿ ನಗರಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ಶಶಿಕಲಾ ನಾಗರಾಜು, ಗೋಪಾಲ್, ಸಿದ್ದಪ್ಪ, ನಿವೃತ್ತ ಇಂಜಿನಿಯರ್ ಚನ್ನಮಲ್ಲಯ್ಯ ಸೇರಿದಂತೆ ಹಲವರು ಇದ್ದರು.