ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ

ಕೆ.ಆರ್.ಪೇಟೆ: ನ.23:- ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗರ ಸುಳ್ಳು ಆಶ್ವಾಸನೆಗಳಿಗೆ ಮರುಳಾಗದೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳೀಗೌಡರ ಪರ ಮತ ಚಲಾಯಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮನವಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದು ತಾಲೂಕು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ವಿವಿದೆಡೆ ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಬೆದರಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಲ್ಪ ಪ್ರಮಾಣದ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಕೆ ಮಾಡಿದ್ದಾರಲ್ಲದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಅನಂತರ ಮೋದಿ ಮತ್ತೆ ಬೆಲೆ ಏರಿಕೆ ಮಾಡಲಿದ್ದಾರೆ. ದೇಶದಲ್ಲಿ ಬಿಜೆಪಿಗರ ಅಪಾಯಕಾರಿ ರಾಜಕಾರಣಕ್ಕೆ ಮತದಾರರು ಅಂತ್ಯಹಾಡಬೇಕೆಂದು ಮನವಿ ಮಾಡಿದ ಕೆ.ಬಿ.ಚಂದ್ರಶೇಖರ್ ಹಾಲಿ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಜೆಡಿಎಸ್ ಪಕ್ಷದ ಅಪ್ಪಾಜಿಗೌಡ ತಾಲೂಕಿನ ಅಭಿವೃದ್ದಿಗೆ ಒಂದೇ ಒಂದು ನಯಾಪೈಸೆಯಷ್ಟು ಸಹಾಯ ಮಾಡಿಲ್ಲ. ಗೆದ್ದ ಅನಂತರ ಒಂದೇ ಒಂದು ಬಾರಿ ತಾಲೂಕಿಗೆ ಭೇಟಿ ನೀಡಿ ಮತಹಾಕಿದವರ ಸಮಸ್ಯೆಗಳನ್ನು ಆಲಿಸಿಲ್ಲ. ಇಂತಹ ಅಪ್ಪಾಜಿಗೌಡರಿಗೆ ಮತ್ತೆ ಮತ ಹಾಕದೆ ಕ್ರಿಯಾಶೀಲ ಅಭ್ಯರ್ಥಿ ಕಾಂಗ್ರೆಸ್ಸಿನ ದಿನೇಶ್ ಗೂಳೀಗೌಡರನ್ನು ಚುನಾಯಿಸುವಂತೆ ಮನವಿ ಮಾಡಿದರು.
ಅಭ್ಯರ್ಥಿ ದಿನೇಶ್ ಗೂಳೀಗೌಡ ಮಾತನಾಡಿ ನಾನು ರೈತ ಕುಟುಂಬಕ್ಕೆ ಸೇರಿದವನು. ನನ್ನ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಎಂಟು ಜನ ಅಧ್ಯಕ್ಷರ ಕೈಕೆಳಗೆ ನಾನು ಕೆಲಸ ಮಾಡಿದ್ದೇನೆ. ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯದಲ್ಲಿ ದುಡಿದಿದ್ದೇನೆ. ನಾನು ಅಭ್ಯರ್ಥಿ ಎನ್ನುವುದು ಗೌಣ. ಕಾಂಗ್ರೆಸ್ಸಿನ ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿಯಿದ್ದಂತೆ. ನನಗೆ ಅವಕಾಶ ಕಲ್ಪಿಸಿಕೊಟ್ಟರೆ ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಧ್ವನಿಯಾಗಿ ಕೆಲಸ ಮಾಡುತ್ತೇನೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮನ್‍ಮುಲ್ ನಿರ್ಧೇಶಕ ಡಾಲು ರವಿ, ರಾಜ್ಯ ನಗರಾಭಿವೃದ್ದಿ ಕೋಶದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಜಿ.ಪಂ ಮಾಜಿ ಸದಸ್ಯ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಾತನಾಡಿ ಪಕ್ಷದ ಅಭ್ಯರ್ಥಿ ದಿನೇಶ್ ಗೂಳೀಗೌಡರನ್ನು ಗೆಲ್ಲಿಸುವ ದಿಕ್ಕಿನಲ್ಲಿ ಕಾರ್ಯಕರ್ತರು ಕೆಲಸ ಮಾಡುವಂತೆ ಮನವಿ ಮಾಡಿದರು.
ಜಿಲ್ಲಾ ಮುಖಂಡರಾದ ಚಿನಕುರಳಿ ರಮೇಶ್, ಸುದರ್ಶನ್, ಮೋಹನ್ ಕುಮಾರ್, ರಾಜಣ್ಣ, ರಮೇಶ್ ಕುಮಾರ್, ವೀಣಾ, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರ ಬಾಬು, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ಮುಖಂಡರಾದ ಡಾ.ರಾಮಕೃಷ್ಣೇಗೌಡ, ದಲಿತ ಮೋರ್ಚಾ ಘಟಕದ ಅಧ್ಯಕ್ಷ ರಾಜಯ್ಯ, ಸಿ.ಬಿ.ಚೇತನ್ ಕುಮಾರ್, ಅಕ್ಕಿ ಮಂಜು, ಬಸ್ತಿ ರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.