ಕಾಂಗ್ರೆಸ್ ಅಭ್ಯರ್ಥಿ ಡಿಕೆಸು ಪರ ಇಕ್ಬಾಲ್ ಪ್ರಚಾರ

ರಾಮನಗರ,ಏ.೨೩- ನಗರದ ಕಾಮಣ್ಣನಗುಡಿ ಸರ್ಕಲ್, ವಿಜಯನಗರ, ರೈಲ್ವೆ ಸ್ಟೇಷನ್ ಸರ್ಕಲ್, ಬಾಲಗೇರಿ, ಮಾಗಡಿ ರಸ್ತೆ, ಐಜೂರು ಮತ್ತಿತರ ಸ್ಥಳಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮತಯಾಚನೆ ನಡೆಸಿದರು.
ರಾಮನಗರದ ಕಾಮಣ್ಣನಗುಡಿ ಸರ್ಕಲ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಆಶ್ವಾಸನೆಯಂತೆ ೫ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ತಲುಪಿಸಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಆಶ್ವಾಸನೆ ಈಡೇರಿಸಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದೆ ಎಂದು ಹೇಳಿದರು.
ಸುಳ್ಳು ಭರವಸೆ ನೀಡುವುದು, ಕೊಟ್ಟ ಆಶ್ವಾಸನೆ ಈಡೇರಿಸದಿರುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ. ನಿಮ್ಮಗಳ ಆಶೀರ್ವಾದದಿಂದ ಈ ಕ್ಷೇತ್ರದ ಶಾಸಕನಾಗಿ ನನ್ನನ್ನು ಆಶೀರ್ವದಿಸಿದ್ದೀರಿ, ಪ್ರೀತಿಯಿಂದ ಕಂಡು ಹರಸಿದ್ದೀರಿ. ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮೂಲಕ ನಿಮ್ಮ ಸೇವೆಗೆ ಸದಾ ಸಿದ್ಧನಿರುತ್ತೇನೆ.
ರಾಮನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಯೋಜನೆ ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಮನೆ ಮನೆಗೂ ಕಾವೇರಿ ನೀರು ಸಿಗಲಿದೆ. ಅರ್ಕಾವತಿ ನದಿ ದಂಡೆಯಲ್ಲಿ ಉದ್ಯಾನವನ ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. ಈಗಾಗಲೇ ಹುಣಸನಹಳ್ಳಿ, ಮಾಗಡಿ ರಸ್ತೆ ಅಭಿವೃದ್ಧಿ ಕೆಲಸ ಗಳು ನಡೆಯುತ್ತಿವೆ ಎಂದರು.
ಬಡವರಿಗೆ ಸೂರು, ಜನರಿಗೆ ಮೂಸೌಕರ್ಯ ಒದಗಿಸಿಕೊಡುವುದೇ ನಮ್ಮ ಮೊದಲ ಆದ್ಯತೆ. ಸಂಸದ ಡಿ.ಕೆ. ಸುರೇಶ್ ಅವರು ಜನ ಸೇವಕರಾಗಿ ಹಗಲಿರುಳು ಜನರಿಗಾಗಿ ದುಡಿಯುವಂತವರು. ಅವರ ಸೇವೆ ಕ್ಷೇತ್ರಕ್ಕೆ ಮತ್ತಷ್ಟು ಬೇಕಾಗಿದೆ.ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಬಲ ತುಂಬಲು ಡಿ.ಕೆ. ಸುರೇಶ್ ಅವರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.
ನಗರಸಭೆ ಸದಸ್ಯ ಕೆ. ಶೇಷಾದ್ರಿ, ಉಪಾಧ್ಯಕ್ಷ ಸೋಮಶೇಖರ್ ಮಣಿ, ಪ್ರಾಧಿಕಾರದ ಅಧ್ಯಕ್ಷ ಚೇತನ್‌ಕುಮಾರ್, ಮುಖಂಡರಾದ ಸಿ.ಎನ್.ಆರ್. ವೆಂಕಟೇಶ್, ಹೆಚ್.ನರಸಿಂಹಯ್ಯ, ದೊಡ್ಡಿ ಸುರೇಶ್, ಗಿರೀಶ್, ಪ್ರಸನ್ನ ಕುಮಾರ್, ಗಿರಿಜಮ್ಮ, ಐಸಾ ಬಾನು, ಪರ್ವೇಜ್ ಪಾಷ, ದೌಲತ್ ಷರೀಫ್ ಮುಂತಾದವರಿದ್ದರು.