ಕಾಂಗ್ರೆಸ್ ಅಭ್ಯರ್ಥಿಪರ ಪ್ರಚಾರದಲ್ಲಿ ಕೋನರೆಡ್ಡಿ


ನವಲಗುಂದ, ಡಿ 4: ರಾಜ್ಯ ಬಿಜೆಪಿ ಸರ್ಕಾರದಲ್ಲಿ ದುರಾಡಳಿತ ಹೆಚ್ಚಾಗಿದ್ದು, ಕೇವಲ ಪರ್ಸೆಂಟೇಜ್ ಲೆಕ್ಕಾಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ.40 ರಷ್ಟು ಕಮೀಷನ್ ಪಡೆಯುತ್ತಿರುವುದರಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದು ವಿಧಾನ ಪರಿಷತ್ ಅಭ್ಯರ್ಥಿ ಸಲೀಂ ಅಹ್ಮದ ಆರೋಪಿಸಿದರು.
ಶುಕ್ರವಾರ ಇಲ್ಲಿಯ ಕೃಷ್ಣ ಕಲ್ಯಾಣ ಕೇಂದ್ರದಲ್ಲಿ ಸ್ಥಳೀಯ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದಿನಬಳಕೆ ವಸ್ತುಗಳು, ಪೆಟ್ರೋಲ್, ಡಿಜೈಲ್ ಹಾಗೂ ಅಡುಗೆ ಅನೀಲ ದರ ಹೆಚ್ಚಾಗಿ ಬೆಲೆ ಏರಿಕೆಯಿಂದಾಗಿ ಬಡವರ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಉತ್ತರ ನೀಡಲು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಬಲಗೋಳಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಸಲೀಂ ಅಹ್ಮದ ಮತದಾರರಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ, ಕೆ.ಎನ್.ಗಡ್ಡಿ, ಎ.ಎಂ.ಹಿಂಡಸಗೇರಿ, ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ಎಫ್.ಎಚ್.ಜಕ್ಕಪ್ಪನವರ, ಇಸ್ಮಾಯಿಲ್ ತಮಟಗಾರ ಉಪಸ್ಥಿತರಿದ್ದರು.
ಹಸಿರು ಶಾಲು ತೆಗೆದ ಕೋನರಡ್ಡಿ :
ಶುಕ್ರವಾರ ನವಲಗುಂದದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಜೆ.ಡಿ.ಎಸ್ ಮುಖಂಡ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಎಂದಿನಂತೆ ಧರಿಸುತ್ತಿದ್ದ ತಮ್ಮ ಹಸಿರು ಶಾಲನ್ನು ಬದಿಗಿಟ್ಟು, ಕಾಂಗ್ರೆಸ್ ಪಕ್ಷದ ಶಾಲನ್ನು ಹೊತ್ತುಕೊಂಡು ಕಾಂಗ್ರೇಸ್ ಅಭ್ಯರ್ಥಿ ಸಲೀಂ ಅಹ್ಮದ ಪರ ಬಹಿರಂಗ ಪ್ರಚಾರ ಕೈಗೊಂಡು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದು ಕಂಡುಬಂದಿತು.