ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.21: ಸಮಾಜದ ಎಲ್ಲಾ ಬಡವರು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಆದ್ದರಿಂದ ಎಲ್ಲರೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿಯೇ ಮಾಜಿ ಸ್ಪೀಕರ್ ದಿವಂಗತ ಕೆ.ಆರ್.ಪೇಟೆ ಕೃಷ್ಣ ಅವರನ್ನು ಸ್ಮರಿಸಿದ ಸಿದ್ದರಾಮಯ್ಯ ನಾನು ಮತ್ತು ಕೃಷ್ಣ ಒಟ್ಟಿಗೆ ರಾಜಕಾರಣಕ್ಕೆ ಬಂದು ಒಟ್ಟಿಗೆ ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದವರು. ಈ ನಾಡು ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಕೃಷ್ಣ. ಕುಟುಂಬ ರಾಜಕಾರಣವನ್ನು ಕಟುವಾಗಿ ವಿರೋಧಿಸಿದವರು ಮಾಜಿ ಸ್ಪೀಕರ್ ಕೃಷ್ಣ. ಅದಕ್ಕಾಗಿಯೇ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಅವರನ್ನು ಮಂತ್ರಿಯನ್ನಾಗಿ ಮಾಡಲಿಲ್ಲ. ಆಗ ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದೆ. ಹಠ ಹಿಡಿದು ಕೃಷ್ಣ ಅವರನ್ನು ಸ್ಪೀಕರ್ ಮಾಡಿಸಿದ್ದೆ. ಕೆ.ಆರ್.ಪೇಟೆಯನ್ನು ಕೃಷ್ಣ ಸಮರ್ಥವಾಗಿ ಪ್ರತಿನಿಧಿಸಿದ್ದರು. ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಇಲ್ಲಿ ನಮ್ಮ ಅಭ್ಯರ್ಥಿ ಬಿ.ಎಲ್.ದೇವರಾಜು ಅವರನ್ನು ನೀವು ಸೋಲಿಸಿದಿರಿ. ಜೆಡಿಎಸ್ ಶಾಸಕನಿಂದ ಕ್ಷೇತ್ರದ ಅಭಿವೃದ್ದಿ ಅಸಾಧ್ಯ. ಕ್ಷೇತ್ರದ ಅಭಿವೃದ್ದಿಗೆ ಮತ್ತು ಮಾಜಿ ಸ್ಪೀಕರ್ ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೆ.ಆರ್.ಪೇಟೆ ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಅತೀಹೆಚ್ಚಿನ ಮತಗಳನ್ನು ನೀಡಬೇಕೆಂದು ಸಿದ್ದರಾಮಯ್ಯ ಕರೆ ನೀಡಿದರು.
ಇಲ್ಲಿ ಸೇರಿರುವ ಜನರನ್ನು ನೋಡಿದರೆ ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀಹೆಚ್ಚು ಮತಗಳು ಬರುವುದು ನಿಶ್ಚಿತ. ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಕಾರ್ಯಕರ್ತರಿಗೆ ಮನೆ ಮನೆಗೆ ಹೋಗಿ ಮತ ಕೇಳುವ ನೈತಿಕ ಶಕ್ತಿ ಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಪಕ್ಷದವರಿಗಲ್ಲ. ಎಲ್ಲಾ ಪಕ್ಷದ ಜನರಿಗೂ ಇದರ ಲಾಭ ದೊರಕುತ್ತಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಬಡವರಿಗೂ ನಮ್ಮ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದ ಸಿದ್ದರಾಮಯ್ಯ ನರೇಂದ್ರ ಮೋದಿ ಮತ್ತು ಹೆಚ್.ಡಿ.ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 10 ವರ್ಷಗಳಾಯಿತು. ಆದರೆ ಅವರು ನುಡಿದಂತೆ ನಡೆದಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನು ಪತ್ತೆಹಚ್ಚಿ ದೇಶದ ಎಲ್ಲಾ ಜನರ ಖಾತೆಗೆ 15 ಲಕ್ಷ ನೀಡುವುದಾಗಿ ಹೇಳಿದರು ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿದ್ದರು. ಪ್ರತಿವರ್ಷ 10 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಆದರೆ ಇದ್ಯಾವುದನ್ನೂ ನರೇಂದ್ರ ಮೋದಿ ಮಾಡಲಿಲ್ಲ. ರಸಗೊಬ್ಬರ, ಅಡುಗೆ ಎಣ್ಣೆ ಬೆಲೆ, ಗ್ಯಾಸ್ ಬೆಲೆ, ಪೆಟ್ರೋಲ್ ಮತ್ತು ಡೀಸಲ್ ಬೆಲೆ, ಹಣ್ಣು ತರಕಾರಿಗಳ ಬೆಲೆ ಏರಿಕೆ ಸೇರಿದಂತೆ ಮೋದಿ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡವರ ಬದುಕನ್ನು ಸಂಕಷ್ಠಕ್ಕೆ ಗುರಿ ಮಡಿರುವುದೇ ಮೋದಿ ಸಾಧನೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಡುತ್ತಿದೆ. ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಠಿಸಿದೆ. ಜನ ಭಾವನಾತ್ಮಕ ವಿಚಾರಗಳಿಗೆ ಬೆಲೆ ಕೊಡಬಾರದೆಂದು ಕರೆ ನೀಡಿದ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅಳುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಮತದಾರರನ್ನು ಮರಳು ಮಾಡಲು ಅವರು ಬಳಸುವ ಕೊನೆಯ ಅಸ್ತ್ರ ವೇದಿಕೆಗಳಲ್ಲಿ ಕಣ್ಣಿರು ಸುರಿಸುವುದು. ದೇವೇಗೌಡ ಮತ್ತು ಕುಮಾರಸ್ವಾಮಿ ರೈತರ ಮಕ್ಕಳು ಎನ್ನುವುದು ನಿಜ. ಆದರೆ ಅವರು ರೈತ ಸಮುದಾಯಕ್ಕೆ ಯಾವ ಅನುಕೂಲ ಮಾಡಿದ್ದಾರೆ? ಲೋಕಸಭೆಯಲ್ಲಿ ದೇವೇಗೌಡರಾಗಲೀ ಅಥವಾ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಾಗಲೀ ಒಂದು ದಿನವಾದರೂ ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡಿದ್ದಾರಾ?. ಮೋದಿ ಜೊತೆ ದೇವೇಗೌಡರು ಚೆನ್ನಾಗಿದ್ದಾರೆ. ಅವರು ಏಕೆ ಮೋದಿ ಮೇಲೆ ಒತ್ತಡ ಹಾಕಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ?. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ ಸೇರಿದಂತೆ 27 ಜನ ಬಿಜೆಪಿಗರನ್ನು ನೀವು ಲೋಕಸಭೆಗೆ ಕಳುಹಿಸಿದ್ದೀರಿ. ಇವರು ಒಮ್ಮೆಯಾದರೂ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದಾರಾ? ಏತಕ್ಕಾಗಿ ಇವರನ್ನು ಲೋಕಸಭೆಗೆ ಕಳುಹಿಸಬೇಕೆಂದು ಕಿಡಿಕಾರಿದ ಸಿದ್ದರಾಮಯ್ಯ ದೇವೇಗೌಡರ ಕುಟುಂಬದ ಕಣ್ನೀರಿಗೆ ಕ್ಷೇತ್ರದ ಜನ ಮರುಳಾಗಬಾರದೆಂದು ಮನವಿ ಮಾಡಿದರು.
ಪ್ರದಾನಿ ನರೇಂದ್ರ ಮೋದಿಗೆ ಕರ್ನಾಟಕ ನೆನಪಾಗುವುದು ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ. ರಾಜ್ಯದಲ್ಲಿ ಅತೀವೃಷ್ಠಿಯಾದಾಗ, ಬರಗಾಲ ಬಂದಿರುವಾಗ ಒಮ್ಮೆಯೂ ಕರ್ನಾಟಕಕ್ಕೆ ಬಂದು ಜನರ ಕಷ್ಠ ಸುಖ ಕೇಳದ ಮೋದಿ ಇದೀಗ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ. ಹಿಂದೆಲ್ಲಾ ಮೋದಿಯನ್ನು ಹೀನಾಯವಾಗಿ ಬೈಯುತ್ತಿದ್ದ ದೇವೇಗೌಡರು, ಮೋದಿ ಪ್ರದಾನಿಯಾದರೆ ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದ ದೇವೇಗೌಡರು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಸೋಲುವ ಭೀತಿಗೆ ಒಳಗಾಗಿರುವ ನರೇಂದ್ರ ಮೋದಿ ಮತ್ತು ದೇವೇಗೌಡರು ಪರಸ್ಪರ ಕೈಜೋಡಿಸಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಬಸವಾದಿ ಶರಣರ ಹಾದಿಯಲ್ಲಿ ನಾವು ನಂಬಿಕೆಯಿಟ್ಟಿದ್ದೇವೆ. ಅದಕ್ಕಾಗಿಯೇ ಬಸವ ಜಯಂತಿ ಆಚರಿಣೆ ತಂದವರು ನಾವು. ಇದೀಗ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ತಂದವರು ನಾವು, ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ಮಡಿದವರು ನಾವು, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟವರು ನಾವು. ಅಧಿಕಾರದಲ್ಲಿದ್ದಾಗ ದೇವೇಗೌಡರಾಗಲೀ, ಯಡಿಯೂರಪ್ಪವರಾಗಲೀ ಅಥವಾ ಕುಮಾರಸ್ವಾಮಿಯವರಾಗಲೀ ಇದನ್ನು ಏಕೆ ಮಾಡಲಿಲ್ಲ ಎಂದು ಗುಡುಗಿದ ಸಿದ್ದರಾಮಯ್ಯ ಕಾಂಗ್ರೆಸ್ ಜಾತ್ಯಾತೀತ ತತ್ವಗಳ ತಳಹದಿಯ ಮೇಲೆ ನಿಂತಿದೆ. ಸರ್ವ ಜನರ ಹಿತರಕ್ಷಣೆ ನಮ್ಮ ಗುರಿ. ಸರ್ವ ಜನರ ಹಿತಕ್ಕಾಗಿ ಜಿಲ್ಲೆಯ ಜನ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಜೊತೆಗೂಡಿದರೆ ಆರಂಭ, ಜೊತೆಗೂಡಿ ಚರ್ಚಿಸಿದರೆ ಪ್ರಗತಿ. ಜೊತೆಗೂಡಿ ಕೆಲಸ ಮಾಡಿದರೆ ಮಾತ್ರ ಯಶಸ್ಸು. ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಅರಿತು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಗೆಲುವಿಗೆ ಶ್ರಮಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಗೆದ್ದೇ ಗೆಲ್ಲುತ್ತಾರೆ. ಮುಂದಿನ ವಿಧಾನ ಸಭೆಯಲ್ಲಿ ಕೆ.ಆರ್.ಪೆಟೆಯಿಂದ ಕಾಂಗ್ರೆಸ್ ಶಾಸಕರಿರುತ್ತಾರೆ. ನಾವು ಈಗಾಗಲೇ ಪ್ರತೀ ಪಂಚಾಯತಿ ಮತ್ತು ಬೂತ್‍ವಾರು ಹಂಚಿಕೆ ಮಾಡಿದ್ದೇವೆ. ವೇದಿಕೆಯಲ್ಲಿ ಕುಳಿತಿರುವ ಲೀಡರ್ ಗಳ ಮೇಲೆ ನನಗೆ ನಂಬಿಕೆಯಿಲ್ಲ. ಬೂತ್ ಮಟ್ಟದಲ್ಲಿ ಯಾರು ನಮ್ಮ ಅಭ್ಯರ್ಥಿಗೆ ಲೀಡ್ ಕೊಡಿಸುತ್ತಾರೋ ಅವರೇ ನಮ್ಮ ಲೀಡರ್. ನೀವು ಲೀಡ್ ಕೊಟ್ಟರೆ ಬನ್ನಿ. ಇಲ್ಲದಿದ್ದರೆ ಮುಂದೆ ಯಾವುದೇ ಕಾರಣಕ್ಕೂ ನನ್ನ ಬಳಿ ಬರಬೆಡಿ ಎಂದು ಡಿಕೆ.ಶಿವಕುಮಾರ್ ವೇದಿಕೆಯಲ್ಲಿ ಆಸೀನರಾಗಿದ್ದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಸೇರಿದಂತೆ ಎಲ್ಲಾ ಮುಖಂಡರಿಗೂ ಬಹಿರಂಗ ಎಚ್ಚರಿಕೆ ನೀಡಿದರು.
ಪ್ರಸಕ್ತ ಚುನಾವಣೆ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕು ಕೊಡುವ ಚುನಾವಣೆ. ಇದುವರೆಗೆ ರಾಜ್ಯ ರಾಜಕಾರಣದಲ್ಲಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸುತ್ತಿದ್ದ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.. ನಮ್ಮ ಕಾಲ ಮೇಲೆ ನಿಂತು ನಾವು ಅಧಿಕಾರಕ್ಕೆ ಬರಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸಿದ್ದೆ. ಅದರಂತೆ ರಾಜ್ಯದಲ್ಲಿಂದು ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷದ ಶಾಸಕರಿದ್ದರು. ಮೂರು ಜನ ಜೆಡಿಎಸ್ ಮಂತ್ರಿಗಳಿದ್ದರು. ಕಳೆದ ಸಲ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ನಾನು ಪ್ರಾಮಣಿಕವಾಗಿ ಮತ ಯಾಚನೆ ಮಾಡಿದೆ. ಆದರೂ ಜಿಲ್ಲೆಯ ಜನ ಸ್ವಾಭಿಮಾನಕ್ಕೆ ಒತ್ತು ನೀಡಿ ನಿಖಿಲ್ ಅವರನ್ನು ಸೋಲಿಸಿದರು. ಕಳೆದ ಸಲ ಕಾಂಗ್ರೆಸ್ ಬೆಂಬಲದಿಂದ ಕಣಕ್ಕಿಳಿದಿದ್ದ ಜೆಡಿಎಸ್ ಇದೀಗ ಬಿಜೆಪಿ ಜೊತೆ ಸೇರಿ ಕಣಕ್ಕಿಳಿದಿದೆ. ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಒಮ್ಮೆ ಆತ್ಮಾವಲೋಕನ ಮಡಿಕೊಳ್ಳಬೇಕು. ದೇವೇಗೌಡರನ್ನು ಪ್ರಧಾನಿ ಮಾಡಿದವರು ರಾಮನಗರ ಜನ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹಾಗೂ ಸಂಸದರನ್ನಾಗಿ ಮಾಡಿದ್ದವರು ರಾಮನಗರದ ಜನ, ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಶಾಸಕಿಯನ್ನಾಗಿ ಮಡಿದವರು ರಾಮನಗರದ ಜನ. ರಾಮನಗರದ ಜನರ ಮೇಲೆ ನಂಬಿಕೆಯಿಲ್ಲದೆ ಅವರನ್ನು ಕೈಬಿಟ್ಟು ಕುಮಾರಸ್ವಾಮಿ ಇದೀಗ ಮಂಡ್ಯ ಕ್ಷೇತ್ರಕ್ಕೆ ಬಂದಿದ್ದಾರೆ. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಜೆಡಿಎಸ್ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರು ಮುಖ್ಯವಲ್ಲ. ಅವರಿಗೆ ಅವರ ಕುಟುಂಬದ ಅಭಿವೃದ್ದಿ ಮಾತ್ರ ಮುಖ್ಯ. ಇದನ್ನು ಜೆಡಿಎಸ್ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದ ಡಿ.ಕೆ.ಶಿವಕುಮಾರ್ ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ. ಮೈತ್ರಿ ಅಭ್ಯರ್ಥಿಗಳ ಬಳಿ ಇರುವುದು ಬರೀ ಬುಟ್ಟಿ ಮತ್ತು ಖಾಲಿಚೊಂಬು. ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ಅಳಿಯ, ಮಗ ಮತ್ತು ಮೊಮ್ಮಗನ ಸೋಲು ನಿಶ್ಚಿತ. ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿಯಲ್ಲಿ ವಿಲೀನಗೊಳ್ಳಲಿದೆ. ಆದ ಕಾರಣ ಎಲ್ಲಾ ಜೆಡಿಎಸ್ ಮುಖಂಡರು ಮತ್ತು ಕಾರ್ಯರ್ತರು ಕಾಂಗ್ರೆಸ್ ಪಕ್ಷ ಸೇರುವಂತೆ ಕರೆ ನೀಡಿದರು.
ಸಚಿವ ಎನ್.ಚಲುವರಾಯಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯಲು ಜಿಲ್ಲೆಯ ಅಭ್ಯರ್ಥಿಯಾದ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಮಾಜಿ ಸಚಿವರಾದ ನರೇಂದ್ರಸ್ವಾಮಿ, ಬಿ.ಸೋಮಸೇಖರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಮುಖಂಡರಾದ ಬಿ.ಎಲ್.ದೇವರಾಜು, ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಕೋಡಿಮಾರನಹಳ್ಳಿ ದೇವರಾಜು, ಶೀಳನೆರೆ ಅಂಬರೀಶ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ನಾಯಕರು ವೇದಿಕೆಯಲ್ಲಿದ್ದರು.