ಕಾಂಗ್ರೆಸ್ ಅಪ್ರಸ್ತುತ, ಜೆಡಿಎಸ್‌ಗೆ ಹಾಕಿದ್ರೆ ಓಟ್ ವೇಸ್ಟ್

ದೇವದುರ್ಗ,ಮಾ.೧೦- ಕಾಂಗ್ರೆಸ್ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದು, ಇದಕ್ಕೆ ಇತ್ತೀಚೆಗೆ ಈಶಾನ್ಯ ರಾಜ್ಯದಲ್ಲಿ ನಡೆದ ಚುನಾವಣೆಯೆ ಸಾಕ್ಷಿಯಾಗಿದೆ. ಮತದಾರರು ಹೆಚ್ಚರಿಕೆಯಿಂದ ಮತದಾನ ಮಾಡಬೇಕಿದೆ. ದೇಶದಲ್ಲಿ ಅಸ್ತಿತ್ವ ಕಳೆದುಕೊಂಡು ಅಪ್ರಸ್ತುತವಾಗುತ್ತಿರುವ ಕಾಂಗ್ರೆಸ್‌ಗೆ ಮನ ನೀಡಿದರೆ ಉಪಯೋಗವಾಗಲ್ಲ. ಜೆಡಿಎಸ್‌ಗೆ ಹಾಕಿದ್ರೆ ಅಧಿಕಾರಕ್ಕೆ ಬರದೆ ನಿಮ್ಮ ಓಟ್ ವೇಸ್ಟ್‌ಆಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಜಾಲಹಳ್ಳಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಇಂದು ಭಾರತವನ್ನು ಜಗತ್ತೆ ಕೊಂಡೊಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯಿಂದ ಅಮೇರಿಕಾ, ರಷ್ಯಾದಂತ ದೊಡ್ಡ ದೇಶಗಳು ಭಾರತದ ಅನುಮತಿ ಇಲ್ಲದೆ ಯಾವುದೇ ತೀರ್ಮಾನ ಕೈಗೊಳ್ಳಲ್ಲ. ಜಗತ್ತಿನ ವೇಗವಾಗಿ ಹಾಗೂ ಸದೃಢ ಆರ್ಥಿಕತೆ ಹೊಂದಿದ ದೇಶಗಳಲ್ಲಿ ಭಾರತ ೫ನೇಸ್ಥಾನದಲ್ಲಿದೆ. ಸೂಕ್ತ ನಾಯಕ ಇಲ್ಲದೆ ಇಂದು ಶ್ರೀಲಂಕಾ ಹಾಗೂ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೆ, ಭಾರತ ಮೋದಿ ಎಂದ ಸಮರ್ಥ ನಾಯಕನಿಂದ ಅಭಿವೃದ್ಧಿಯಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಮಾಡಿದರು. ಕಾಂಗ್ರೆಸ್, ಜೆಡಿಎಸ್ ಅಧಿಕಾರ ನಡೆಸಿದ್ದರೂ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ೫ಸಾವಿರ ಕೋಟಿ ರೂ. ಮೀಸಲಿಟ್ಟು ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ೧೪೦ಸ್ಥಾನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಕೆ.ಶಿವನಗೌಡ ನಾಯಕ, ಜಿಲ್ಲಾ ಪ್ರಭಾರ ಸಿದ್ದಯ್ಯ ಯಾದವ್, ಶಿವಣ್ಣ ತಾತ ಮುಂಡರಗಿ, ಮರಿತಾತ, ಸಿದ್ದರಾಜು ಇತರರಿದ್ದರು.