
ಹುಬ್ಬಳ್ಳಿ/ಬಾಗಲಕೋಟೆ,ಫೆ.೨೬:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಜನ ಚುನಾವಣೆಯಲ್ಲಿ ಆರ್ಶೀವಾದ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬಗಲಕೋಟೆಯ ತೇರದಾಳಕ್ಕೆ ತೆರಳಲು ಇಲ್ಲಿನ ಬನಹಟ್ಟಿ ಹೆಲಿಪ್ಯಾಡ್‌ಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಕೃಷಿ, ಕೈಗಾರಿಕೆ, ಔದ್ಯೋಗಿಕ, ಗ್ರಾಮೀಣಾಭಿವೃದ್ಧಿ, ನೀರಾವರಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಗಿದೆ.
ಈ ಅಭಿವೃದ್ಧಿಯ ಪ್ರಗತಿಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ. ಜನ ಚುನಾವಣೆಯಲ್ಲಿ ಆರ್ಶೀವಾದ ಬಿಜೆಪಿಗೆ ಮಾಡುವ ವಿಶ್ವಾಸವಿದೆ ಎಂದರು. ಮತ್ತು ಕಾಂಗ್ರೆಸ್ ನಾಯಕರನ್ನು ಜನ ನೋಡಿದ್ದಾರೆ. ಕಾಂಗ್ರೆಸ್ ಆಡಳಿತ ಏನು ಎಂಬುದು ಜನಕ್ಕೆ ಗೊತ್ತಿದೆ. ಹಾಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದರು.ಅಧಿಕಾರಕ್ಕೆ ಬಾರದ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆದಿದೆ. ಇದನ್ನೆಲ್ಲ ಜನರೇ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಅವರು ಹೇಳಿದರು.ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕಾಂಗ್ರೆಸ್ ಆಧಾರರಹಿತ ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡುತ್ತಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರಧಾನಿ ಮೋದಿ ಅವರು ಅಭಿವೃದ್ಧಿ ಮಾಡದಿದ್ದರೂ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರು ಟೀಕೆಗೆ ಕಿಡಿಕಾರಿದ ಅವರು, ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಮಾತಿಗೆ ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಹುಬ್ಬಳ್ಳಿ ವರದಿ
ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಮಠಾಧೀಶರು ಚುನಾವಣಾ ಅಖಾಡಕ್ಕಿಳಿಯುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ರಾಜಕೀಯ ನಿವೃತ್ತಿ ವಿಚಾರ ಅವರ ಸ್ವಂತದ್ದು, ಇದಕ್ಕೆಲ್ಲ ತಾವು ಪ್ರತಿಕ್ರಿಯಿಸಲ್ಲ ಎಂದರು.೭ನೇ ವೇತನ ಆಯೋಗದ ಮಧ್ಯಂತರ ವರದಿ ಆದೇಶಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಮಾ. ೧ ರಿಂದ ಮುಷ್ಕರಕ್ಕೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಗಾಗಲೇ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.