ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಂಟು ದಿನಗಳಲ್ಲೆ ಮೈಷುಗರ್ ಗೆ ಅನುದಾನ

ಮದ್ದೂರು: ಜೂ.09:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ  ಬಂದ ಎಂಟು ದಿನಗಳಲ್ಲಿ ಜಿಲ್ಲೆಯ ಮೈಷುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಜಿಲ್ಲೆಯ ರೈತರ ಹಿತ ಕಾದಿರುವುದಾಗಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಆಯೋಜಿಸಿದ ನೂತನ ಸಚಿವರಿಗೆ ಅಭಿನಂದನಾ
ಕಾರ್ಯಕ್ರಮದ ವೇಳೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಹಿಂದೆ ಏಳು ಮಂದಿ ಜೆಡಿಎಸ್ ಶಾಸಕರಿದ್ದರು ಅಭಿವೃದ್ಧಿ ಮಾತ್ರ ಶೂನ್ಯವಾಗಿದ್ದು ಅವರೇ ಪಕ್ಷದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು ಬಳಿಕ  ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಕಾರ್ಖಾನೆಯನ್ನು ಪ್ರಾರಂಭ  ಮಾಡಿದ್ದರು.
ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂದು ಸ್ಥಳಿಯ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಿದ್ದರಾಮಯ್ಯನವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಖಾನೆ ಪ್ರಾರಂಭಿಸಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದರು ಅದರಂತೆ ಕೊಟ್ಟ ಮಾತಿನಂತೆ ಕಾರ್ಖಾನೆ ಪ್ರಾರಂಭಿಸಿ 50 ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ರೈತರ ಹಿತ ಕಾಯ್ದಿದ್ದಾರೆಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದು ಚುನಾವಣೆ ವೇಳೆ ನೀಡಿದ 5 ಗ್ಯಾರಂಟಿಗಳನ್ನು ಸರ್ಕಾರ  ಜಾರಿಗೊಳಿಸಿದ್ದು  ಏಕಕಾಲದಲ್ಲಿ 59 ಸಾವಿರ ಕೋಟಿ ರೂಗಳನ್ನು ಬಿಡುಗಡೆ ಗೊಳಿಸಿ ಪ್ರತಿ ಜಿಲ್ಲೆಗೂ ಅನುದಾನ ಹಂಚಿಕೆ ಮಾಡಿದ್ದಾರೆಂದರು. ತಾವು ಕೃಷಿ ಸಚಿವರಾಗಿದ್ದು ರೈತರ ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಪೂರೈಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು ಬಿತ್ತನೆ ಬೀಜ ರಸಗೊಬ್ಬರ ಇನ್ನಿತರ ಯೋಜನೆಗಳು ಸಕಾಲದಲ್ಲಿ ದೊರೆಯಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಕೊಪ್ಪ ಗ್ರಾಮದಲ್ಲಿ ಹಲವಾರು ದಿನಗಳಿಂದಲೂ  ನೆನೆಗುದಿಗೆ ಬಿದ್ದಿರುವ ಹೈಟೆಕ್ ಬಸ್ ನಿಲ್ದಾಣ ಪ್ರವಾಸಿ ಮಂದಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿರುವುದು ಮತ್ತು ರಸ್ತೆ ಅಭಿವೃದ್ಧಿ ಇನ್ನಿತರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಾದರಿ ಕೊಪ್ಪ ಗ್ರಾಮ ಪಂಚಾಯತಿನ್ನಾಗಿಸಲು ಪಣತೊಟ್ಟಿರುವುದಾಗಿ ಹೇಳಿದರು,  ಈ ಭಾಗದ ಜನರ ಬಹುದಿನದ ಬೇಡಿಕೆಯದ  ಉಪನೊಂದಣಾಧೀಕಾರಿ ಕಚೇರಿ ತೆರೆಯುವಂತೆ ಸ್ಥಳೀಯರು ಮನವಿ ಮಾಡಿದ್ದು ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಮಹಿಳೆಯರ ಆರ್ಥಿಕ ಅಭಿವೃದ್ಧಿ  ಮತ್ತು ಸ್ವಯಂ ಉದ್ಯೋಗಗಳನ್ನು ಕಂಡುಕೊಳ್ಳುವ ಸದುದ್ದೇಶದಿಂದ ಕೊಪ್ಪ ಗ್ರಾಮದಲ್ಲಿ ಗಾರ್ಮೆಂಟ್ಸ್ ತೆರೆಯಲು ಯೋಜನೆ ರೂಪಿಸಿದ್ದು ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮವಹಿಸುವುದಾಗಿ ಹೇಳಿದರು.
ಕೊಪ್ಪ ಗ್ರಾಮ ವ್ಯಾಪ್ತಿಯ ಎಂಟು  ಪಂಚಾಯಿತಿಗಳಲ್ಲೂ ಮುಖಂಡರು ಕಾರ್ಯಕರ್ತರು ತಮ್ಮ ಗೆಲುವಿಗಾಗಿ ಹಗಲಿರುಳು  ಶ್ರಮಿಸಿದ್ದು ತಾವು ಸಚಿವರಾಗಲು ಕ್ಷೇತ್ರದ ಜನರೇ ಕಾರಣರಾಗಿದ್ದು ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರೋಡ್ ಶೋ ಕಾರ್ಯಕ್ರಮಕ್ಕೂ ಮುನ್ನ ನಾಗಮಂಗಲ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಗ್ರಾಮಕ್ಕೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಕೃಷಿ ಸಚಿವ ಎನ್,ಚೆಲುವರಾಯ ಸ್ವಾಮಿ ಅವರನ್ನು  ಶಾಶ್ವತಿ ಸಮುದಾಯ ಭವನದಿಂದ ಸಂತೆ ಮೈದಾನದವರವಿಗೂ ಸಾಂಸ್ಕೃತಿಕ ಕಲಾತಂಡಗಳೊಟ್ಟಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಬಳಿಕ ಸಂತೆ ಮೈದಾನದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ನೂತನ ಸಚಿವ ಚೆಲುವರಾಯಸ್ವಾಮಿಯವರನ್ನು ಅಭಿನಂದಿಸಿ ಗೌರವಿಸಿದರು.
ಈ ವೇಳೆ  ತಾ.ಪಂ.ಮಾಜಿ ಅಧ್ಯಕ್ಷ ಬಿ,ಎಂ,ರಘು,ಮಾಜಿ ಸದಸ್ಯ ತೋಯಿಜಾಕ್ಷ ,ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ದಿವಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ಮುಖಂಡರಾದ ಕೃಷ್ಣೇಗೌಡ, ರಮೇಶ್, ಶಿವಲಿಂಗಯ್ಯ,ಕರಿಗೌಡ, ಕುಮಾರ್ ಕೊಪ್ಪ, ತಗ್ಗಹಳ್ಳಿ ಚಂದ್ರು, ಶ್ರೀನಿವಾಸ್, ಗಟ್ಟಹಳ್ಳಿ ಹರೀಶ್, ಸೀನಪ್ಪ, ರಾಮಕೃಷ್ಣ, ಇತರರಿದ್ದರು.