ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಭಜಿತ ಬಳ್ಳಾರಿ ಜಿಲ್ಲೆ ಒಂದು ಮಾಡಲಿದೆ: ನಾಗೇಂದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.06: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ  ಸಚಿವ ಆನಂದ್ ಸಿಂಗ್ ಅವರಿಂದ ಎರಡಾಗಿರುವ ಬಳ್ಳಾರಿ ಜಿಲ್ಲೆಯನ್ನು ಮತ್ತೆ ಒಂದು ಮಾಡಲಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ‌ ಬಿ. ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಸಂಗನಕಲ್ಲು ರಸ್ತೆಯ ಎಂಆರ್ ಕೆ ಪಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ವಿಧಾನ‌ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಐತಿಹಾಸಿಕ ಬಳ್ಳಾರಿ ಜಿಲ್ಲೆ ವಿಭಜನೆ ಅವಶ್ಯಕತೆ ಇರಲಿಲ್ಲ ಆದರೆ ಬಿಜೆಪಿಯವರು ಜಿಲ್ಲೆ ವಿಭಜನೆ ಮಾಡಿ ಅನ್ಯಾಯ ಮಾಡಿದ್ದಾರೆಂದರು.
ಜಿಲ್ಲೆ ವಿಭಜನೆಗೆ ತಮ್ಮ‌ಸಮ್ಮತಿ‌ ಎಂದಿದ್ದ ಕೆ.ಸಿ.ಕೊಂಡಯ್ಯ ಅವರ ಪ್ರಚಾರ ಸಭೆಯಲ್ಲಿ‌ ಹೀಗೆ  ಹೇಳಿದ್ದು ವಿಪರ್ಯಾಸವಾಗಿತ್ತು.
 ಬಿಜೆಪಿ ಅಭ್ಯರ್ಥಿ ಬಗ್ಗೆ ನನಗೆ ಈವರಗೆ ಗೊತ್ತಿರಲಿಲ್ಲ. ಯಾವ ನೈತಿಕತೆಯಿಂದ ಮತ ಕೇಳಲು ಬಂದಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರು ಬಹುತೇಖರು ರೈತರಾಗಿದ್ದು ಬಿಜೆಪಿಯವರ ಆಡಳಿತದಿಂದ ರೈತರಿಗೆ ಏನು ತೊಂದರೆ ಆಗಿದೆಂದು ಬಿಜೆಪಿಯವರಿಗೆ  ಹೇಳಿ ಕಳಿಸಿದ್ದಾರೆ.
ಕೊಂಡಯ್ಯ ಅವರ ಕೆಲಸಗಳನ್ನು ಎಲ್ಲರೂ ನೋಡಿದ್ದಾರೆ. ಎಲ್ಲರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಕೆಲಸ ಆಗುವವರೆಗೆ ಅಧಿಕಾರಿಗಳ ಬೆನ್ನತ್ತುತ್ತಾರೆ. ಚಾಣಕ್ಷರಾಗಿರುವ ಕೊಂಡಯ್ಯ ಅವರು ಪರಿಷತ್ ಗೆ ಸೂಕ್ತರಾಗಿದ್ದಾರೆ. 
ನನಗೆ ಕಷ್ಟ ಬಂದಾಗ ಅವರ ನೆರವಿನಿಂದಾಗಿ ನಾನು ಇಂದು ಶಾಸಕನಾಗಿ ಇರುವೆ. ನಮ್ಮಲ್ಲಿ ಕೆಲ  ಭಿನ್ನಾಭಿಪ್ರಾಯ ಕಾಣಬಹುದು ಆದರೆ ಕಾಂಗ್ರೆಸ್ ಎಂದು ಬಂದಮೇಲೆ ನಾವೆಲ್ಲರೂ ಒಂದೇ. ಕಳೆದ ಬಾರಿ ‌ನಾನು
2800 ಮತಗಳಿಂದ ಗೆದ್ದಿದ್ದೆ ಈ ಬಾರಿ 28 ಸಾವಿರ ಮತಗಳ‌ ಲೀಡ್ ನಿಂದ ಗೆಲ್ಲುವೆ ಅದಕ್ಕೆ ಜನರ ಸಹಕಾರ ಇದೆ.
ನಾನು ಯಾರೊಬ್ಬರಿಗೂ ಅನ್ಯಾಯ ಮಾಡಲ್ಲ. ದಬ್ಬಾಳಿಕೆ ಸಹಿಸಲ್ಲ ಎಂದ ಅವರು ರೈತರ ಸಂಕಷ್ಟಕ್ಕಾಗಿ ರಾತ್ರಿ ಸಮಯದಲ್ಲೂ ತೆರಳಿ ಕಾಲುವೆಗೆ ನೀರು ಬಿಡಿಸುವ ಕೆಲಸ  ಮಾಡಿರುವೆ ಎಂದರು.
ಸಭೆಯಲ್ಲಿ ಅಭ್ಯರ್ಥಿ ಕೆ.ಸಿ.ಕೊಂಡಯ್ಯ, ವಿಧಾನ‌ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಪಕ್ಷದ ನ್ರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಮುಖಂಡರಾದ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಜೀವೇಶ್ವರಿ ರಾಮಕೃಷ್ಣ, ಎಂ.ಶ್ರೀಧರ್, ಅಸುಂಡಿ ನಾಗರಾಜಗೌಡ, ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.