ಕಾಂಗ್ರೆಸ್‍ನ್ನು ಅಧಿಕಾರಕ್ಕೆ ತರಲು ಮನವಿ

ಕೆ.ಆರ್.ಪೇಟೆ:ಏ:19: ಮಂಡ್ಯ ಜಿಲ್ಲೆಯನ್ನು ಕಡೆಗಣಿಸಿರುವ ಜೆಡಿಎಸ್ ಮತ್ತು ಈಗಿನ ಅಭಿವೃದ್ಧಿ ವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರಾದ ಎನ್.ಚೆಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪ್ರಜ್ಞಾವಂತ ಮತದಾರರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಬಂಡಿಹೊಳೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಸುತ್ತಲೂ ಇರುವ ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿವೆ ಆದರೆ ಮಂಡ್ಯ ಜಿಲ್ಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇವೆ ಎಂದು ಬೊಬ್ಬೆಯೊಡೆದು ಕಳೆದ ಭಾರಿ 7ಕ್ಕೆ 7ಸ್ಥಾನ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಂಡು 14ತಿಂಗಳು ಮುಖ್ಯಮಂತ್ರಿತಯಾಗಿ ಅಧಿಕಾರ ನಡೆಸಿದ ಹೆಚ್.ಡಿ.ಕುಮಾರಣ್ಣ ಅವರು ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ ಬದಲಿಗೆ ಮೈಷುಗರ್ ಕಾರ್ಖಾನೆಯನ್ನು ಮುಚ್ಚುವ ಮೂಲಕ ರೈತರ ಜೀವನಾಡಿಗೆ ಕೊಡಲಿ ಪೆಟ್ಟು ನೀಡಿದರು. ಮಂಡ್ಯ ಜಿಲ್ಲೆಯ ಜನ ಜೆಡಿಎಸ್ ಪಕ್ಷವನ್ನು ಹೊತ್ತು ಮೆರೆಸಿದರು. ಆದರೆ ಹಾಸನ ಜಿಲ್ಲೆಗೆ ನೀಡಿದ ಅರ್ಧದಷ್ಟು ಅಭಿವೃದ್ಧಿಗೆ ಅನುಧಾನ ನೀಡಿದ್ದರೆ ಜಿಲ್ಲೆಯು ಸಮಗ್ರ ಅಭಿವೃದ್ಧಿ ಕಾಣಬೇಕಾಗಿತ್ತು ಆದರೆ ಮಂಡ್ಯ ಜಿಲ್ಲೆಗೆ ಅನ್ಯಾಯ ಮಾಡಿದರು. ಇಂತಹ ಪಕ್ಷವನ್ನು ಇನ್ನಾದರೂ ದೂರವಿಟ್ಟು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ನಾಯಕತ್ವ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಠಿಯಿಂದ ಶಕ್ತಿ ತುಂಬಬೇಕು. ನಾವು ಜೆಡಿಎಸ್ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಅವರನ್ನು ಮನವೊಲಿಸಿ ಮಂಡ್ಯ ಮಿಮ್ಸ್, ಕೆ.ಆರ್.ಪೇಟೆ ಇಂಜಿನಿಯರಿಂಗ್ ಕಾಲೇಜು, ನಾಗಮಂಗಲದಲ್ಲಿ ಆರ್.ಟಿ.ಓ ಕಚೇರಿ ಎಲ್ಲಾ ತಾಲ್ಲೂಕುಗಳಲ್ಲಿ ಮಿನಿವಿಧಾನ ಸೌಧಗಳ ನಿರ್ಮಾಣ ಮಾಡಿ ಪ್ರಮುಖ ಊರುಗಳಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೆವು ಇದನ್ನು ಹೊರತು ಪಡಿಸಿ ನಾವು ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ ನಂತರ ಒಂದೇ ಒಂದು ಗುರುತರವಾದ ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ನಡೆದಿಲ್ಲ ಹಾಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಶ್ರಮಿಸಲು ಸೈನಿಕರಂತೆ ಸಜ್ಜಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಆಶೀರ್ವಾದ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲೆಯ ಮತದಾರರಲ್ಲಿ ಕೈಮುಗಿದು ವಿನಂತಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಪಕ್ಷವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರ ಸಾರಥ್ಯದಲ್ಲಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯವಾದುದಾಗಿದೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಒಂದಲ್ಲ ಒಂದು ಅಧಿಕಾರ ಸಿಕ್ಕೇ ಸಿಗುತ್ತದೆ ಇದನ್ನು ಅರ್ಥ ಮಾಡಿಕೊಂಡು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸ್ಥಾನವನ್ನು ಗೆಲ್ಲಿಸುವ ಮೂಲಕ ಮಂಡ್ಯ ಜಿಲ್ಲಾ ಪಂಚಾಯಿತಿ ಹಾಗೂ ಎಲ್ಲಾ ಏಳು ತಾಲ್ಲೂಕು ಪಂಚಾಯಿತಿಗಳನ್ನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರವು ಮೂಲಕ ಶಕ್ತಿ ತುಂಬಬೇಕು. ಈ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ವಿಧಾನಸಭಾ ಚುನಾವಣೆಯಲ್ಲಿ ಸುಲಭವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗಲಿದೆ ಹಾಗಾಗಿ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.