ಕಾಂಗ್ರೆಸ್‍ನಿಂದ ಟೂಲ್‍ಕಿಟ್ ಬಳಸಿ ದೇಶದ್ರೋಹಿ ಕಾರ್ಯತಂತ್ರ:ತೇಲ್ಕೂರ

ಕಲಬುರಗಿ ಮೇ 20: ತಮ್ಮ ಸ್ವಾರ್ಥದ ಅವಕಾಶವಾದಿ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಅರಾಜಕತೆಯನ್ನುಂಟು ಮಾಡುವ ದೇಶದ್ರೋಹಿ ಕಾರ್ಯತಂತ್ರವನ್ನು ರೂಪಿಸಲು ಬಳಸಿರುವ ಟೂಲ್‍ಕಿಟ್ ಎನ್ನುವ ಷಡ್ಯಂತ್ರವು ಈ ಸಂಕಷ್ಟದ ಸಮಯದಲ್ಲೂ ಸಂತ್ರಸ್ತರ ಸಾವಿಗೆ ಕಾರಣವಾಗಿದ್ದು, ದೇಶದಲ್ಲಿ ಆತಂಕದ ಸೃಷ್ಟಿ ಉಂಟು ಮಾಡಲು ಕಾರಣವಾಗಿರುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ ಎಂದು ರಾಜ್ಯ ಬಿಜೆಪಿ ವಕ್ತಾರ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದ್ದಾರೆ.
ಇತ್ತೀಚಿನ ಚುನಾವಣೆಗಳಲ್ಲಿ ಧೂಳೀಪಟವಾಗಿರುವ ಕಾಂಗ್ರೆಸ್, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ರಾಷ್ಟ್ರವಿರೋಧಿ ಚಿಂತನೆಯೊಂದಿಗೆ ಭಾರತವನ್ನು ವಿರೋಧಿಸುವ ವಿದೇಶಿ ಮಾಧ್ಯಮ ಮಿತ್ರರ ಸಹಕಾರದೊಂದಿಗೆ ಬುದ್ಧಿಜೀವಿಗಳು, ಲೇಖಕರು, ಆಕ್ಟಿವಿಸ್ಟ್‍ಗಳು ಮತ್ತು ಆಯ್ದ ಕೆಲವು ಮಾಧ್ಯಮ ಮಿತ್ರರ ಸಹಕಾರದೊಂದಿಗೆ, ಈ ಸಂಕ್ರಮಣ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಗ್ರಹಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ತಮ್ಮ ಅಪಾರ ಅನುಭವದೊಂದಿಗೆ ರಚನಾತ್ಮಕ ಸಲಹೆ ನೀಡುವುದರ ಬದಲು ದೇಶವಿರೋಧಿ ಕೃತ್ಯಗಳ ಮೂಲಕ ರಾಜಕೀಯ ಅವಕಾಶಕ್ಕಾಗಿ ಹಪಹಪಿಸುತ್ತಾ ಈ ರೀತಿಯ “ಟೂಲ್‍ಕಿಟ್” ಕಾರ್ಯತಂತ್ರ ರೂಪಿಸಿರುವುದು ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅತ್ಯಂತ ಕನಿಷ್ಠ ಮಟ್ಟದ ಮನಸ್ಥಿತಿಗೆ ಕೈಗನ್ನಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಆಮ್ಲಜನಕದ ಕೊರತೆ, ಬೆಡ್ ಬ್ಲಾಕಿಂಗ್ ದಂಧೆ, ರೆಮಿಡಿಸಿವಿರ್ ಮತ್ತು ಇತರ ಜೀವನಾವಶ್ಯಕ ಔಷಧಿಗಳ ಕಾಳಸಂತೆ, ಡುಪ್ಲಿಕೇಟ್ ಔಷಧಿಗಳ ಕಾರಸ್ಥಾನ ಮುಂತಾದವುಗಳ ಹಿಂದೆ ಈ ತಂತ್ರಗಾರಿಕೆಯ ಮೂಲಕ ಒಂದು ವ್ಯವಸ್ಥಿತ ಸಂಚು ನಡೆಸಿರುವುದನ್ನು ಸಾಕ್ಷೀಕರಿಸುತ್ತದೆ ಎಂದು ದೂರಿದ್ದಾರೆ.
ಚೀನಾದಿಂದ ಜಗತ್ತಿನೆಲ್ಲೆಡೆಗೆ ರಫ್ತಾಗಿರುವ ಮತ್ತು ಜಗತ್ತಿನೆಲ್ಲೆಡೆ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಲಕ್ಷಾಂತರ ಜನರ ಸಾವು ನೋವುಗಳಿಗೆ ಕಾರಣವಾಗಿದ್ದ ಚೀನಾವನ್ನು ಟೀಕಿಸುವಲ್ಲಾಗಲೀ, ಅಥವಾ ಕೋವಿಡ್ 19 ವೈರಸ್ ಅನ್ನು ಚೀನಾ ವೈರಸ್,ವುಹಾನ್ ವೈರಸ್ ಎಂದು ಕರೆಯಲು ಧೈರ್ಯ ತೋರದ ಕಾಂಗ್ರೆಸ್, ವೈದ್ಯಕೀಯ ಜಗತ್ತಿಗೇ ಸವಾಲಾಗಿರುವ ಕೋವಿಡ್‍ನ ಎರಡನೇ ಅಲೆಯ ಸಾಂಕ್ರಾಮಿಕವನ್ನು ಡಬ್ಲ್ಯುಎಚ್‍ಒ ನಿರ್ದೇಶನಕ್ಕೆ ವಿರುದ್ಧವಾಗಿ ಇಂಡಿಯಾ ವೇರಿಯೆಂಟ್,ಮೋದಿ ಸ್ಟ್ರೀನ್ ಎಂದು ಕರೆದು ದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುವ ನೀಚತನಕ್ಕೆ ಇಳಿದಿರುವುದು ಅತ್ಯಂತ ದುರಾದೃಷ್ಟಕರ.
ಜಗತ್ತೇ ಮೆಚ್ಚಿಕೊಂಡು ಶ್ಲಾಘಿಸಿರುವ ಭಾರತದ ಲಸಿಕೆಯ ಅಭಿವೃದ್ಧಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗತ್ಯತೆಗೆ ಅನುಗುಣವಾಗಿ ಔಷಧಿಗಳನ್ನು ಮತ್ತು ಅಗತ್ಯವಿರುವ ಸಣ್ಣ ರಾಷ್ಟ್ರಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಿರುವುದು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿರುವುದು ಕಾಂಗ್ರೆಸ್‍ನಲ್ಲಿ ಅಸಹನೆಯನ್ನು ಉಂಟು ಮಾಡಿದ್ದು, ಲಸಿಕಾ ಅಭಿಯಾನವನ್ನು ಅತ್ಯಂತ ಕಟುವಾಗಿ ಟೀಕಿಸಿ, ಲಸಿಕೆಯ ಸಾಮರ್ಥ್ಯವನ್ನು ಶಂಕಿಸಿ ನೀಡಿರುವ ಬೇಜವಾಬ್ದಾರಿ ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಸಂದೇಹವನ್ನು ಸೃಷ್ಟಿ ಮಾಡಿರುವ ಕಾಂಗ್ರೆಸ್‍ನ ಮುಖಂಡರು ಈಗ ಅದೇ ಲಸಿಕಾ ಅಭಿಯಾನದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವುದು ಒಂದು ವಿಡಂಬನೆ.
ಕಾಂಗ್ರೆಸ್ ಪಕ್ಷವೇ ಅಧಿಕೃತವಾಗಿ ನೀಡಿರುವ ದೂರಿನನ್ವುಯ ಅತ್ಯಂತ ಉನ್ನತ ಮಟ್ಟದ ತನಿಖೆ ನಡೆಸಿ ಈ ಟೂಲ್‍ಕಿಟ್ ಕಾರ್ಯತಂತ್ರದ ಹಿಂದೆ ಇರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಾ, ಹತಾಶ ಕಾಂಗ್ರೆಸ್ ಪಕ್ಷದ ದೇಶವಿರೋಧಿ ಟೂಲ್‍ಕಿಟ್ ಕಾರ್ಯತಂತ್ರ ವನ್ನು ಅತ್ಯಂತ ಕಟುವಾದ ಶಬ್ದಗಳಿಂದ ಖಂಡಿಸುವದಾಗಿ ಹೇಳಿದ್ದಾರೆ.