ಕಾಂಗ್ರೆಸ್‍ನವರು ಜೊತೆಯಲ್ಲಿದ್ದಾಗ ಏನೂ ಹೇಳಲಿಲ್ಲ

ಮೈಸೂರು,ಏ.17:- ಉಪಚುನಾವಣೆಯಲ್ಲಿ ಹಣ ಹಂಚಿಕೆ ಆರೋಪ ಕುರಿತಂತೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡಬಾರದು. ಸರ್ಕಾರ ಇದ್ದ ಸಂದರ್ಭದಲ್ಲಿ ನಾವು ಆರೋಪ ಮಾಡಿದ್ದೆವು. ಈಗ ಅವರು ಆರೋಪ ಮಾಡುತ್ತಿದ್ದಾರೆ ಎಂದರು.
ಮೈಸೂರು ಪ್ರವಾಸದಲ್ಲಿರುವ ಸಚಿವರು ಪ್ರತಿಕ್ರಿಯಿಸಿ ನಿನ್ನೆ ಕಾಂಗ್ರೆಸ್ ನವರು ನನ್ನ ಜೊತೆಯಲ್ಲೇ ಇದ್ದರು. ಆಗ ನೇರವಾಗಿ ನನ್ನ ಬಳಿ ಹೇಳಲಿಲ್ಲ. ಈಗ ಮಾಧ್ಯಮಗಳಲ್ಲಿ ಆ ರೀತಿ ಹೇಳಿಕೆ ನೀಡಬಾರದು. ಬಸವಕಲ್ಯಾಣ,ಮಸ್ಕಿ, ಬೆಳಗಾವಿ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕೆಲವು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಬೆಂಗಳೂರಿನಲ್ಲಿ ಶವಸಂಸ್ಕಾರದ ವಿಚಾರವಾಗಿ ಒಂದೆರಡು ನ್ಯೂನತೆಗಳಿತ್ತು. ಅದನ್ನು ನಿನ್ನೆ ಸಭೆ ನಡೆಸಿ ಸರಿಪಡಿಸಲಾಗಿದೆ. ನನ್ನ ಕ್ಷೇತ್ರ ಸೇರಿದಂತೆ ಎಲ್ಲೂ ಕೂಡ ಆಸ್ಪತ್ರೆಗಳ ಸಮಸ್ಯೆ ಇಲ್ಲ. ಮುಖ್ಯಮಂತ್ರಿಗಳಿಗೆ ಅನಾರೋಗ್ಯ ಕಾರಣ ಸರ್ವಪಕ್ಷ ಸಭೆ ಮುಂದೂಡಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯದಿದ್ದರೆ ಅದಕ್ಕೆ ಗಾಂಭೀರ್ಯ ಇರುವುದಿಲ್ಲ. ಮೂರ್ನಾಲ್ಕು ದಿನದಲ್ಲಿ ಆರೋಗ್ಯದಿಂದ ಹೊರಬರುತ್ತಾರೆ. ಆ ನಂತರ ಸಭೆ ನಡೆಸಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆಗೆ ಪ್ರಚಾರ ಮುಗಿದ ಬಳಿಕ ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗೆಟಿವ್ ಬಂದಿದೆ. ನನ್ನಿಂದ ಬೇರೆಯವರಿಗೆ ತೊಂದರೆಯಾಗಬಾರದು ಅಂತ ತಕ್ಷಣ ಟೆಸ್ಟ್ ಮಾಡಿಸಿದೆ. ನನ್ನ ಜೊತೆ ಬಂದವರು ಟೆಸ್ಟ್ ಮಾಡಿಸಿದ್ದಾರೆ. ಅವರುಗಳ ವರದಿ ಕೂಡ ನೆಗೆಟಿವ್ ಇದೆ. ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದವರು ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿ. ಕೊರೊನಾ ಬಗ್ಗೆ ಯಾರೂ ಗಾಬರಿಯಾಗಬೇಡಿ. ನಿಮ್ಮ ಆತಂಕ ಮತ್ತು ಗಾಬರಿ ಸಮಸ್ಯೆ ಹೆಚ್ಚು ಮಾಡುತ್ತದೆ. ಎಲ್ಲರೂ ಜಾಗರೂಕತೆಯಿಂದ ಇರಿ ಎಂದರು.
ಬೆಟ್ಟಕ್ಕೆ ಭೇಟಿ: ವಸತಿ ಸಚಿವರಾದ ವಿ.ಸೋಮಣ್ಣ ಅವರು ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮೈಸೂರಿಗೆ ಆಗಮಿಸುತ್ತಿದ್ದಂತೆಯೇ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರು.
ಸಚಿವರು ತಮ್ಮ ಧರ್ಮಪತ್ನಿ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರು ಸಚಿವರನ್ನು ಬರಮಾಡಿಕೊಂಡರು.