ಕಾಂಗ್ರೆಸ್‍ಗೆ ಮೈಸೂರು ಮೇಯರ್ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಒಪ್ಪಿಗೆ

ಮೈಸೂರು: ಜೂ08: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ಜೆಡಿಎಸ್ ಒಪ್ಪಿಗೆ ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಹೇಳಿದರು.
ನಗರದಲ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್‍ಗೆ ಉಳಿದ 8 ತಿಂಗಳ ಅವಧಿಗೆ ಮೇಯರ್ ಸ್ಥಾನ ಬಿಟ್ಟುಕೊಡುವುದು ಇಲ್ಲವೇ ಜೆಡಿಎಸ್ ಮೇಯರ್ ಸ್ಥಾನ ಉಳಿಸಿಕೊಳ್ಳುವುದು ಎಂದು ಶಾಸಕ ಸಾ.ರಾ.ಮಹೇಶ್ ಅವರು ಎರಡು ಆಯ್ಕೆಯನ್ನು ನೀಡಿದ್ದರು. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದಾಗ, ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಬೇಕು ಎಂದಿದ್ದಾರೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜೂನ್ 11ಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಲಿದ್ದಾರೆ. ನಂತರ ಒಪ್ಪಂದದಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಕುರಿತು ಶಾಸಕ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿ, ನಾವು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ಕಳೆದ ಬಾರಿಯೇ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದ್ದೆವು.
ಆದರೆ, ಜೆಡಿಎಸ್ ಎಲ್ಲಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ ಕಾರಣ ನಾವು ಪಟ್ಟು ಬಿಡಲಿಲ್ಲ. ನಂತರ ತನ್ವೀರ್ ಸೇಠ್ ಜೊತೆ ಮಾತುಕತೆ ನಡೆಸಿ ಸ್ಥಾನ ಪಡೆದಿದ್ದೆವು. ಈಗಲೂ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಬಿಟ್ಟುಕೊಡಲು ನಮ್ಮ ತಕರಾರೇನಿಲ್ಲ. ಆದರೆ, ಮುಂದಿನ ಬಾರಿಗೆ ಮೇಯರ್, ಉಪಮೇಯರ್, ವರ್ಕ್ ಕಮಿಟಿ ಎಲ್ಲವನ್ನೂ ಜೆಡಿಎಸ್‍ಗೆ ಬಿಟ್ಟುಕೊಡಬೇಕು. ಅದರ ನಂತರದ ಅವಧಿಗೂ ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಅವರು ಒಪ್ಪುವುದಾದರೆ ಈಗ ಕಾಂಗ್ರೆಸ್ ನಾವು ಈಗ ಸ್ಥಾನ ಬಿಟ್ಟುಕೊಡುತ್ತೇವೆ? ಎಂದು ಬೇಡಿಕೆ ಇಟ್ಟಿದ್ದಾರೆ.
ಆಸ್ತಿ ವಿವರ ಸರಿಯಾಗಿ ನೀಡದ ಕಾರಣ ನ್ಯಾಯಾಲಯ ತೀರ್ಪಿನಿಂದ ತೆರವಾಗಿರುವ ಮೇಯರ್ ಸ್ಥಾನಕ್ಕೆ ಜೂನ್ 11ಕ್ಕೆ ಚುನಾವಣೆ ನಡೆಯಲಿದೆ.