ಕಾಂಗ್ರೆಸ್‌ಬಿಟ್ಟು ಬಿಜೆಪಿ ಸೇರ್ಪಡೆಯಾಗುತ್ತಿರುವ ಮುಖಂಡರು

ಒಳಬೇಗುದಿಯ ಲಾಭ ಪಡೆಯುತ್ತಿದೆಯೇ ಬಿಜೆಪಿ..?
ದುರುಗಪ್ಪ ಹೊಸಮನಿ
ಲಿಂಗಸುಗೂರು : ಚುನಾವಣೆ ಸಂದರ್ಭಗಳಲ್ಲಿ ಪಕ್ಷಾಂತರ ಮಾಡುವುದು ಸಾಮಾನ್ಯ. ಆದರೆ, ಲಿಂಗಸುಗೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿನ ಒಳಬೇಗುದಿಗೆ ಬೇಸತ್ತ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಗಮನಿಸುತ್ತಿದ್ದರೆ ಬರುವ ದಿನಗಳಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಗೆಲ್ಲಲ್ಲು ಅಖಾಡ ಸಿದ್ಧಪಡಿಸಿಕೊಳ್ಳುತ್ತಿದೆ ಎನ್ನವುದು ಭಾಸವಾಗುತ್ತಿದೆ.
ಹಟ್ಟಿ ಚಿನ್ನದಗಣಿ ಅಧ್ಯಕ್ಷರಾದ ಬಳಿಕ ಮಾನಪ್ಪ ವಜ್ಜಲ್‌ರ ವರ್ಚಸ್ಸು ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿನ ಹೈಕಮಾಂಡ್‌ಗಳ ದ್ವಂದ್ವ ನಿಲುವುಗಳಿಂದ ಬೇಸತ್ತು ಗ್ರಾಮೀಣ ಭಾಗದಲ್ಲಿ ನೂರಾರು ಮುಖಂಡರು ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ಎರಡು ಅವಧಿಗೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವರೂ ಕ್ಷೇತ್ರದ ಹಿತಾಸಕ್ತಿ ಕಾಯ್ದುಕೊಳ್ಳಲು ಮತ್ತು ಅನ್ಯ ಪಕ್ಷದವರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ.
ಬರುವ ಮುಖಂಡರುಗಳಿಗೆ ಸ್ವಾಗತ ಕೋರುವ ಮೂಲಕ ಬಿಜೆಪಿ ಮಣೆ ಹಾಕುತ್ತಿದೆ ಎನ್ನುವುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿವೆ.
ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರಾದ ಮುದುಕಪ್ಪ ವಕೀಲರು ಮಾನಪ್ಪ ವಜ್ಜಲ್‌ರನ್ನು ಭೇಟಿ ಮಾಡಿದ್ದರು. ಇದಕ್ಕೆ ಇಂಬು ನೀಡುವಂತೆ ಹಟ್ಟಿಯ ಕಾಂಗ್ರೆಸ್ ಮುಖಂಡ ಶಂಕರಗೌಡ ಅವರು ಕಾರ್ಯಕ್ರಮವೊಂದರಲ್ಲಿ ಮಾನಪ್ಪ ವಜ್ಜಲ್‌ರೊಂದಿಗೆ ಆಪ್ತವಾಗಿ ಮಾತನಾಡಿರುವುದೂ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆನ್ನುವ ವದಂತಿಗಳಿಗೆ ಪುಷ್ಠಿ ನೀಡಿದಂತಾಗಿದೆ.
ಸಧ್ಯಕ್ಕೆ ಪಂಚಾಯಿತಿ ಚುನಾವಣೆಗಳು ನಡೆಯುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ಪರವಾಗಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ ಅಖಾಡಾ ರಂಗೇರಿದೆ. ಕಾಂಗ್ರೆಸ್‌ನ ಒಳಬೇಗುದಿಯನ್ನು ಬಿಜೆಪಿ ಲಾಭ ಪಡೆಯುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.