ಕಾಂಗ್ರೆಸ್‌ನ ಲಸಿಕಾ ಅಭಿಯಾನಕ್ಕೆ ಅನುಮತಿ ನೀಡಿ; ಡಿಕೆಶಿ


ಬೆಂಗಳೂರು,ಮೇ ೧೭- ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಕಾಂಗ್ರೆಸ್ ರೂಪಿಸಿರುವ ೧೦೦ ಕೋಟಿ ಯೋಜನೆಗೆ ಸರ್ಕಾರ ಅನುಮತಿ ನೀಡಲಿ ನಾವು ಸರ್ಕಾರದದ ಜತೆ ಕೈ ಜೋಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಜೀವ ಉಳಿಸುವುದು ಮುಖ್ಯ. ಅದೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳನ್ನು ನಂತರ ನೋಡಿಕೊಳ್ಳೋಣ. ಲಸಿಕಾ ಅಭಿಯಾನಕ್ಕೆ ಅನುಮತಿ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು.
ಕಾಂಗ್ರೆಸ್‌ನ ಎಲ್ಲ ಶಾಸಕರು, ಸಂಸದರು ಸೇರಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ೧ ಕೋಟಿ ಹಣವನ್ನು ಲಸಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ೯೩ ಶಾಸಕರು ಹಾಗೂ ವಿಧಾನಸಭಾ ಸದಸ್ಯರಿದ್ದು, ಉಳಿದ ಹಣವನ್ನು ಕಾರ್ಯಕರ್ತರ ಬಳಿ ಭಿಕ್ಷೆ ಎತ್ತಿ ಸಂಗ್ರಹಿಸುತ್ತೇವೆ, ಸರ್ಕಾರ ಈ ಜನಪರ ಕೆಲಸಕ್ಕೆ ಅನುಮತಿ ನೀಡಲಿ ಎಂದು ಅವರು ಹೇಳಿದರು.
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶೇ. ೨೫ ರಷ್ಟು ಅನುದಾನ ಬಳಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಹಾಸಿಗೆ, ವೆಂಟಿಲೇಟರ್ ಖರೀದಿಗೂ ಅನುಮತಿ ಇದೆ. ಹೀಗಾಗಿಯೇ ೧೦೦ ಕೋಟಿ ರೂ. ಮೊತ್ತದ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದರು.