ಕಾಂಗ್ರೆಸ್‌ನಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ: ಶಾಸಕ ಕಾಮತ್

ಮಂಗಳೂರು, ಜೂ.೧- ಲಸಿಕೆ ವಿತರಣಾ ಕೇಂದ್ರಗಳಲ್ಲಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಖಂಡರು ಹವಣಿಸುತಿದ್ದಾರೆ. ಅವರ ಈ ಪ್ರಯತ್ನದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುವುದು ಬಿಟ್ಟು ಬಿಕ್ಕಟ್ಟು ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತಿದ್ದಾರೆ. ಲಸಿಕೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಹಬ್ಬಿಸಿ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಉಂಟಾಗುವ ಪರಿಸ್ಥಿತಿ ನಿರ್ಮಿಸುವ ಕಾರ್ಯ ಕಾಂಗ್ರೇಸ್ ಮುಖಂಡರು ಮಾಡುತಿದ್ದಾರೆ. ಆ ಮೇಲೆ ಫ್ಲೆಕ್ಸ್ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ಕಾಂಗ್ರೇಸ್ ಮುಖಂಡರು ತಮ್ಮ ಸಲಹೆಗಳೇನಾದರೂ ಇದ್ದರೆ ಜಿಲ್ಲಾಡಳಿತಕ್ಕೆ ಸಲಹೆಗಳನ್ನು ನೀಡಲಿ. ಅದು ಬಿಟ್ಟು ರಾಜಕೀಯ ಹೇಳಿಕೆಗಳಲ್ಲೇ ಕಾಲಹರಣ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಲಸಿಕೆ ನೀಡುವ ಮುಂಚಿನ ದಿನವಷ್ಟೇ ಲಸಿಕೆ ಬರುವ ಕುರಿತು ಖಾತ್ರಿಯಾಗುತ್ತದೆ. ಆ ಕಾರಣಕ್ಕಾಗಿ ಜನರಿಗೆ ಲಸಿಕೆ ನೀಡುವ ದಿನ ಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಜಿಲ್ಲಾಡಳಿತದ ವ್ಯವಸ್ಥೆಯಡಿಯಲ್ಲಿ ಟೋಕನ್ ನೀಡಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಆಡಳಿತ ವ್ಯವಸ್ಥೆ ಮೇಲೆ ಜನ ಸಾಮಾನ್ಯರನ್ನು ಎತ್ತಿಕಟ್ಟಲು ಕಾಂಗ್ರೇಸ್ ಹಬ್ಬಿಸುವ ಸುಳ್ಳು ಪ್ರಚಾರದಿಂದ ಜನರು ಮುಂಜಾವಿನ ೩ ಗಂಟೆಗೆ ಸರತಿ ಸಾಲಿನಲ್ಲಿ ನಿಲ್ಲುವುದು, ಕಾದು ಕೂರುವ ಘಟನೆಗಳು ಆಗುತ್ತಿದೆ. ಅನಗತ್ಯ ಸುಳ್ಳು ಸುದ್ದಿಗಳನ್ನು ನಂಬದೆ ಸಾರ್ವಜನಿಕರು ಲಸಿಕೆ ಸಿಗುವ ದಿನ ಲಸಿಕಾ ಕೇಂದ್ರಗಳಿಗೆ ಬರಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.