ಕಾಂಗ್ರೆಸ್‌ನಿಂದ ಮಾತ್ರ ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿಗೆ ನ್ಯಾಯ

ರಾಯಚೂರು.ನ.07- ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಷಿರುದ್ದೀನ್ ಅವರ ಹೇಳಿಕೆ ಸಂಪೂರ್ಣ ಸುಳ್ಳೆಂದು ಜಿಲ್ಲಾ ಸೇವಾದಳ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ ರೆಡ್ಡಿ ಅವರು ಹೇಳಿದ್ದಾರೆ.
ಕಳೆದ 35, 45 ವರ್ಷಗಳಿಂದ ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುತ್ತಲೇ ಬಂದಿರುವ ಸತ್ಯ ಬಷೀರುದ್ದೀನ್ ಅವರು ಅರಿಯಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿವರೆಗೂ ಮಹ್ಮದ್ ಉಮರ್ , ಸಿದ್ಖಿ, ಸೈಯದ್ ಯಾಸೀನ್ ಇವರಿಗೆ ಟಿಕೆಟ್ ನೀಡಿ, ಕ್ಷೇತ್ರದಲ್ಲಿ ಮುಸ್ಲೀಂರಿಗೆ ನ್ಯಾಯ ನೀಡಿದ್ದು, ಏಕೈಕ ಕಾಂಗ್ರೆಸ್ ಪಕ್ಷ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆಂದು ಹೇಳಿದ ಬಷಿರುದ್ದೀನ್ ಅವರ ಪತ್ನಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷ ಸ್ಥಾನ ನೀಡಿದ್ದು, ಕಾಂಗ್ರೆಸ್ ಪಕ್ಷ.
ನಗರಸಭೆಯ ಉಪಾಧ್ಯಕ್ಷ ಸ್ಥಾನ ಗೌಸ್ ಮೊಹಿನುದ್ದೀನ್ ನವಾಬ್ ಚೌದರಿ ಅವರಿಗೆ ನೀಡಿದೆ. ಇದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಹ್ಮದ್ ಉಮರ್ ಸಾಬ್, ಗದ್ವಾಲ್ ಖಲೀಲ್, ಮಹ್ಮದ್ ಉಮರ್ ಫಾರೂಕ್ ಮತ್ತು ಅಬ್ದುಲ್ ಕರೀಂ ಅವರನ್ನು ನೇಮಕ ಮಾಡಿ, ಅಲ್ಪಸಂಖ್ಯಾತ ಮುಸ್ಲೀಂ ಸಮುದಾಯಕ್ಕೆ ನ್ಯಾಯ ಒದಗಿಸಿದೆ. ಅಲ್ಲದೇ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪಾರಸಮಲ್ ಸುಖಾಣಿ ಅವರಿಗೂ ಗ್ರಾಮೀಣ ವಿಧಾನಸಭಾದ ಟಿಕೆಟ್ ನೀಡಿತ್ತು. ಅವರನ್ನು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮತ್ತು ಸಮಾಜಗಳಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಇದಕ್ಕೆ ನಗರಸಭೆ ಅಧ್ಯಕ್ಷರಾಗಿದ್ದ ಎ.ಪಾಪಾರೆಡ್ಡಿ, ಎಂ.ಈರಣ್ಣ, ಪಾರಸಮಲ್ ಸುಖಾಣಿ ಅವರು ಸಾಕ್ಷಿಯಾಗಿದ್ದಾರೆಂದು ಸ್ಪಷ್ಟಪಡಿಸಿದರು.