ಕಾಂಗ್ರೆಸ್‌ನಿಂದ ದಲಿತರಿಗೆ ನಿರಂತರ ಅಪಮಾನ

ದಾವಣಗೆರೆ,ಜ.06: ದಲಿತರನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ಅಪಮಾನಿಸಿಕೊಂಡು ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ಸಿಂಗ್ ಆರ್ಯ ಆರೋಪಿಸಿದರು.ನಗರದ ಸೋಮೇಶ್ವರ ವಿದ್ಯಾಲಯದ ಸಭಾಂಗಣದಲ್ಲಿಂದು ನಡೆದ ರಾಜ್ಯ ಬಿಜೆಪಿ ಎಸ್ಸಿ ಕಾರ‍್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸುಧೀರ್ಘವಾಗಿ ದೇಶ ಆಳಿರುವ ಕಾಂಗ್ರೆಸ್ ದೇಶದ ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡಿಕೊಂಡು ಬಂದಿದೆ ಎಂದು ದೂರಿದರು.ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದಲ್ಲದೇ, ಅವರ ಅಂತ್ಯಕ್ರಿಯೆಗೂ ದೆಹಲಿಯಲ್ಲಿ ನಡೆಸದೇ, ಮಹಾರಾಷ್ಟ್ರದ ಸ್ಲಂನಲ್ಲಿ ನಡೆಸುವ ಮೂಲಕ ಅಂಬೇಡ್ಕರ್‌ಗೆ ಅಪಮಾನ ಮಾಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಐದು ಕಡೆಗಳಲ್ಲಿ ಅಂಬೇಡ್ಕರ್ ಅವರ ಸ್ಮಾರಕ ನಿರ‍್ಮಿಸಿ ಅವರನ್ನು ಗೌರವಿಸಿದೆ ಎಂದು ಹೇಳಿದರು.ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿರುವ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದ ಜನತೆಯ ವಿಕಾಸ ಮಾಡಲಿಲ್ಲ. ಹೀಗಾಗಿ ಈ ವರ್ಗದ ಜನ ಇಂದಿಗೂ ಗುಡಿಸಲುಗಳಲ್ಲಿ ವಾಸುತ್ತಿದ್ದಾರೆ. ಆದರೆ, ಗುಡಿಸಲು ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 2022ರ ವೇಳೆಗೆ ದೇಶದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸುವ ಗುರಿ ಹೊಂದಿದ್ದಾರೆ ಎಂದರು.ಗಾಂಧಿ, ಅಂಬೇಡ್ಕರ್ ಎಂದೂ ಬೆಂಕಿ ಹಚ್ಚುವ ಕೆಲಸ ಮಾಡಲಿಲ್ಲ. ಆದರೆ, ಸಿಎಎ, ಎನ್‌ಆರ್‌ಸಿ ವಿರೋಧಿಸಿ ಈ ಇಬ್ಬರು ಮಹಾನಾಯಕರ ಭಾವಚಿತ್ರ ಇಟ್ಟುಕೊಂಡು ದೇಶಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದು, ಇವರಿಂದ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಮೇಲಿದೆ ಎಂದು ಹೇಳಿದರು.ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಮಾತನಾಡಿ, ದೇಶವನ್ನು ಸುಧೀರ್ಘ ಆಳಿರುವ ಕಾಂಗ್ರೆಸ್ ಗಾಂಧಿ ಹಾಗೂ ಅಂಬೇಡ್ಕರ್ ಹೆಸರು ಹೇಳಿ ಮತ ಬ್ಯಾಂಕ್ ಸೃಷ್ಟಿಕೊಂಡು, ಇವರಿಬ್ಬರನ್ನು ಅತಿ ಹೆಚ್ಚು ಅಪಮಾನ ಮಾಡಿದೆ. ಎಸ್ಸಿ, ಎಸ್ಟಿಗಳಿಗೆ ಶಿಕ್ಷಣ, ಉದ್ಯೋಗ ಮಾತ್ರವಲ್ಲಾ ಎಲ್ಲಾ ಕ್ಷೇತ್ರಗಳಲ್ಲಿಯೂ ಕಡೆಗಣಿಸಿದ್ದು ಕಾಂಗ್ರೆಸ್ ಸಾಧನೆಯಾಗಿದೆ ಎಂದು ಆರೋಪಿಸಿದರು.ಬಿಜೆಪಿಯಿಂದ ಮಾತ್ರ ಪರಿಶಿಷ್ಟರ ರಕ್ಷಣೆ ಸಾಧ್ಯವಾಗಿದೆ. ದಲಿತ ಮುಖ್ಯಮಂತ್ರಿ ರ‍್ಚೆ ಮುನ್ನೆಲೆಗೆ ತಂದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ. ಜಿ.ಪರಮೇಶ್ವರ್ ಅವರಿಗೂ ಸ್ಥಾನಮಾನ ನೀಡಲಿಲ್ಲ. ಹೀಗೆ ನಿರಂತವಾಗಿ ದಲಿತ ನಾಯಕರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿಕೊಂಡು ಬಂದಿದ್ದಾರೆ. ಆದರೆ, ಬಿಜೆಪಿ ದಲಿತ ವರ್ಗಕ್ಕೆಸೇರಿದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ, ಗೋವಿಂದ್ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿತು. ಇದನ್ನು ಗಮನಿಸಿರುವ ಪರಿಶಿಷ್ಟ ಜಾತಿಯ ಜನ ಬಿಜೆಪಿ ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಹೀಗಾಗಿ ಈಗ ಬಿಜೆಪಿ ಕೇವಲ ಬ್ರಾಹ್ಮಣರ ಪಕ್ಷವಾಗಿ ಉಳಿಯದೇ ರಾಜ್ಯ ವ್ಯಾಪಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅತಿ ಹೆಚ್ಚು ದಲಿತ ಸಂಸದರು, ಶಾಸಕರು ಇರುವ ಪಕ್ಷ ಯಾವುದಾದರು ಇದ್ದರೆ ಅದು ಬಿಜೆಪಿ ಮಾತ್ರ. ಈಗ ಎಸ್ಸಿ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಎಸ್ಸಿ ಅನ್ನುವ ಪರಿಸ್ಥಿತಿ ದೇಶದಲ್ಲಿ ನಿರ‍್ಮಾಣವಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿಯ ಸಂಸದ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಕೋಟಿ ಅನುದಾನವಿದೆ. ಆದರೆ, ಅಲ್ಲಿ ಒಮ್ಮೆ ಸೌಲಭ್ಯ ಪಡೆದವರೇ, ಪದೇ, ಪದೇ ಸೌಲಭ್ಯ ಪಡೆಯುತ್ತಿದ್ದಾರೆ. ಹೀಗಾಗಿ ಎಸ್ಸಿ  ಮೊರ್ಚಾ ಕಾರ್ಯಕರ್ತರು ಇತರರಿಗೂ ಸರ‍್ಕಾರದ ಸೌಲಭ್ಯ ಕಲ್ಪಿಸಿ, ಪಕ್ಷ ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು.ಬಿಜೆಪಿ ರಾಜ್ಯ ಎಸ್ಸಿ ಮೊರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಶಾಸಕರಾದ ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಮುನಿಕೃಷ್ಣ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಸಿದ್ದರಾಜು, ಅರುಣ್ ಮತ್ತಿತರರು ಉಪಸ್ಥಿತರಿದ್ದರು.