ಕಾಂಗ್ರೆಸ್‌ನಲ್ಲಿ ಬೆಂಕಿ ಬಿದ್ದಿದೆ, ನಮ್ಮಲ್ಲಿ ಹೊಗೆ ಮಾತ್ರ: ಕಟೀಲ್‌

ಮಂಗಳೂರು, ಎ.೩- ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಗೊಂದಲ ಮಿತಿಮೀರಿ, ಜಗಳ ಬೀದಿಗೆ ಬಿದ್ದಿದೆ. ಆ ಪಕ್ಷದಲ್ಲಿ ಬೆಂಕಿ ಬಿದ್ದಿದೆ, ಹಾಗಿರುವಾಗ ನಮ್ಮಲ್ಲಿ ಹೊಗೆ ಬರುವುದು ಸಹಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಈಶ್ವರಪ್ಪನವರು ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಕಾಂಗ್ರೆಸ್ ಮುಖಂಡರ ಹೇಳಿಕೆ ಕುರಿತಂತೆ ಸುದ್ದಿಗಾರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿರುವ ಕುರಿತಂತೆ ಅವರು ಹಾಗೂ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗಿದೆ. ಎರಡು ದಿನಗಳಲ್ಲಿ ಇದು ಸುಖಾಂತ್ಯಗೊಳ್ಳಲಿದೆ. ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರ ಪತ್ರಿಕಾ ಪ್ರಕಟನೆಯನ್ನು ರಾಹುಲ್ ಗಾಂಧಿ ಹರಿದು ಹಾಕಿರುವಂತಹ ಅವಮಾನವನ್ನು ಈಶ್ವರಪ್ಪ ಮಾಡಿಲ್ಲ ಎಂಬುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಾದ ಬೆಳಗಾಂ, ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಜಯ ಗಳಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಯತ್ನಾಳ್‌ ಅವರಿಗೆ ನೋಟಿಸ್‌ ನೀಡಲಾಗಿದ್ದು, ಅವರು ಉತ್ತರ ನೀಡಿರುತ್ತಾರೆ” ಎಂದರು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಈ ವಿಚಾರ ತನಿಖೆಯಲ್ಲಿದೆ. ಹಾಗಾಗಿ ನಾನು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಧಿಕಾರಿಗಳ ತನಿಖಾ ವರದಿಯ ಸತ್ಯಾಗಿರುತ್ತದೆ” ಎಂದು ತಿಳಿಸಿದರು.