ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ, ಸಮನ್ವಯದ ಕೊರತೆ ಇದೆ: ಮಾಜಿ ಸಚಿವ ಸೊರಕೆ


ಪಡುಬಿದ್ರಿ, ಜ.೮- ನಮ್ಮಲ್ಲಿ ಕಾಳೆಲೆಯುವವರು ಇರುವುದರಿಂದ ಪಕ್ಷ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಒಗ್ಗಟ್ಟಿಲ್ಲ. ನಮ್ಮಲ್ಲಿ ಸಮನ್ವಯತೆಯ ಕೊರತೆ ಇದೆ. ನಾವು ಒಗ್ಗಟ್ಟಾಗಿದ್ದರೆ ನಿರೀಕ್ಷಿತ ಫಲಿತಾಂಶ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಿಗುತಿತ್ತು ಎಂದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಬೇಸರ ವ್ಯಕ್ತಪಡಿಸಿದರು.
ಪಡುಬಿದ್ರಿ ಸ್ಥಾನೀಯ ಕಾಂಗ್ರೆಸ್ ವತಿಯಿಂದ ಪಡುಬಿದ್ರಿಯ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಸೊರಕೆ ಜನ್ಮ ದಿನಾಚರಣೆ ಮತ್ತು ನೂತನ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ತಳಮಟ್ಟದ ಕಾರ್ಯಕರ್ತರು, ನಾಯಕರಲ್ಲಿನ ಒಗ್ಗಟ್ಟಿನ ಕೊರತೆ ಕಂಡುಬರುತ್ತಿದೆ. ಕಳೆದ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿಯೂ ನಾವು ಯಶಸ್ವಿಯಾಗಲಿಲ್ಲ. ನಾವು ಮೊದಲು ಸಂಘಟಿತರಾಗಬೇಕು ಎಂದು ವಿನಯಕುಮಾರ್ ಸೊರಕೆ ಬೇಸರದಿಂದ ನುಡಿದರು. ವಿನಯ ಕುಮಾರ್ ಸೊರಕೆ ಜನ್ಮದಿನದ ಅಂಗವಾಗಿ ಸ್ಥಾನೀಯ ಸಮಿತಿಯ ವ್ಯಾಪ್ತಿಯಲ್ಲಿನ ಮಹಿಳೆಯರಿಗೆ ಸೀರೆ, ಸಿಹಿತಿಂಡಿಗಳನ್ನು ಹಂಚಲಾಯಿತು. ಮಾಜಿ ಕ್ಷೇತ್ರಾಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ವೈ. ಸುಧೀರ್ ಕುಮಾರ್, ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ಅಶೋಕ್ ಸಾಲ್ಯಾನ್, ಅಬ್ದುಲ್ ರಹ್ಮಾನ್, ರಮೀಝ್ ಹುಸೈನ್, ಸುಚರಿತಾ ಅಮೀನ್, ಕೀರ್ತಿ ಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು.