ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ

ವಿಜಯಪುರ.ಏ೧೯:ಕಳೆದ ೮ ವರ್ಷಗಳಿಂದ ಸಂಪೂರ್ಣ ಅಭಿವೃದ್ಧಿಯಲ್ಲಿ ಹಿಂದುಳಿಯಲು ಅತಿ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿದ್ದ, ಕಾಂಗ್ರೆಸ್ ಪಕ್ಷ ಕಾರಣವಾಗಿದ್ದು, ಅದಕ್ಕೆ ಸರಿಯಾದ ಉತ್ತರ ನೀಡುವ ಕಾಲ ಈಗ ಬಂದಿದ್ದು ಈ ಸಮಯವನ್ನು ಮತದಾರರು ಸಂಪೂರ್ಣವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು .
ಅವರು ಇಲ್ಲಿನ ಬಸವೇಶ್ವರ ನಗರದ ಶ್ರಿ ವಿನಾಯಕ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಭಾನುವಾರದಂದುಪಕ್ಷದ ಪುರಸಭೆಯ ಅಭ್ಯರ್ಥಿಗಳ ಪರ ಪೂಜೆ ಸಲ್ಲಿಸಿ, ಚುನಾವಣಾ ಪ್ರಣಾಳಿಕೆಯ ಕರಪತ್ರಗಳನ್ನು ಬಿಡುಗಡೆ ಮಾಡಿ, ಮಾತನಾಡುತ್ತಿದ್ದರು
ರಾಜ್ಯದಲ್ಲಿಯೇ ಅತ್ಯುತ್ತಮ ಪುರಸಭೆ ಎಂದು ಹೆಸರು ಗಳಿಸಿದ ಪುರಸಭೆ ಇಂದಿನ ಅದೋಗತಿಗೆ ಬರಲು ಕಾಂಗ್ರೆಸ್ ಪಕ್ಷವೇ ಕಾರಣ ವಾಗಿದ್ದು, ಅದನ್ನು ತೊಡೆದು ಹಾಕಲು ಇದೀಗ ಸುಸಮಯ ಬಂದಿದ್ದು, ಮತದಾರರು ೨೩ವಾರ್ಡ್‌ಗಳಲ್ಲಿಯೂ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿ ಪರ ಮತ ನೀಡಬೇಕೆಂದು ತಿಳಿಸಿದರು
ಕೆಲ ಮತದಾರರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರಶ್ನಿಸಿದಾಗ ಕಳೆದ ಬಾರಿ ಅತಿ ಹೆಚ್ಚಿನ ಬಹುಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಪ್ರಜಾಪ್ರಭುತ್ವವನ್ನೇ ೮ ವರ್ಷಗಳ ಕಾಲ ಇಲ್ಲದಂತೆ ಮಾಡಿಕೊಂಡ ಪರಿಸ್ಥಿತಿಯನ್ನು ಮತ್ತೆ ತಂದುಕೊಳ್ಳದೇ, ಜೆ.ಡಿ.ಎಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಬೇಕೆಂದು, ತಿಳಿಸಿದರು.
ಮತ ನೀಡಿ ಅಭಿವೃದ್ದಿ ಕೇಳಿ :_ತಾವು ಶಾಸಕರಾಗಿ ಬಂದಾಗಿನಿಂದಲೂ ಕೇವಲ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದ್ದು, ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಇದ್ದಾಗ ಕ್ಷೇತ್ರಕ್ಕೆ ೫೦೦ ಕೋಟಿಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದು, ಪಟ್ಟಣದ ಎಷ್ಟೋ ಮಂದಿ ಕಡುಬಡವ ರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಾಕಷ್ಟು ಸಹಾಯ ಧನ ಕೊಡಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ೧ನೇ ವಾರ್ಡ್ ನ ಅಭ್ಯರ್ಥಿ ಪಿ ನಾರಾಯಣಸ್ವಾಮಿ ಎರಡನೇ ವಾರ್ಡ್ ನ ಅಭ್ಯರ್ಥಿ ರಾಜೇಶ್ವರಿ ಎಸ್.ಭಾಸ್ಕರ್, ಇಪ್ಪತ್ತೊಂದನೇ ವಾರ್ಡ್‌ನ ಅಭ್ಯರ್ಥಿ ವಿಮಲಾ ಬಸವರಾಜು. ೩ ನೇ ವಾರ್ಡ್‌ನ ಅಭ್ಯರ್ಥಿ ಸುಷ್ಮಾ ಮಹೇಶ್, ತಾಲ್ಲೂಕು ಜೆಡಿಎಸ್ ಗೌರವಾಧ್ಯಕ್ಷ ಎಂ.ಮುನೇಗೌಡ, ಕಾರ್ಯದರ್ಶಿ ರವೀಂದ್ರ, ಯುವ ಜೆಡಿಎಸ್ ಅಧ್ಯಕ್ಷ ಭರತ್ .ಟೌನ್ ಜೆಡಿಎಸ್ ಅಧ್ಯಕ್ಷ ಎಸ್ ಭಾಸ್ಕರ್, ಮಾಜಿ ಅಧ್ಯಕ್ಷ ಎನ್ ನಾರಾಯಣಸ್ವಾಮಿ, ನಿವೃತ್ತ ರೇಷ್ಮೆ ಇಲಾಖೆ ನೌಕರರಾದ ಕೃಷ್ಣಾನಂದ್, ನಿವೃತ್ತ ಬಿ.ಎಂ.ಟಿ.ಸಿ ನೌಕರರಾದ ರಾಜಶೇಖರ್, ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಆಸಿಫ್, ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ನಿಸರ್ಗ ನಾರಾಯಣಸ್ವಾಮಿರವರು ಭಾನುವಾರ ಬೆಳಗಿನಿಂದ ೧,೨,೩,೨೧ ನೇ ವಾರ್ಡ್‌ಗಳಲ್ಲಿ ಸಂಚರಿಸಿ, ಜೆ.ಡಿ.ಎಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದರು.