ಕಾಂಗ್ರೆಸ್ಸೇ ಬಂದ್ ಆಗ್ತಿದೆ: ಸಿಎಂ ಲೇವಡಿ

ಹುಬ್ಬಳ್ಳಿ,ಮಾ.೬:ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜನ ಸ್ಪಂದಿಸಲ್ಲ,ಕಾಂಗ್ರೆಸ್ ಏನು ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ಸೇ ಬಂದ್ ಆಗುತ್ತಿದೆ. ಹೀಗಾಗಿ ರಾಜಕೀಯ ಭವಿಷ್ಯಕ್ಕಾಗಿ ಈ ರೀತಿಯ ಪ್ರತಿಭಟನೆ, ಬಂದ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಸಿಗಲ್ಲ ಎಂದರು.ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಾ. ೯ ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭ್ರಷ್ಟಾಚಾರದ ಕೂಪ ಕಾಂಗ್ರೆಸ್, ಅವರು ಮಾಡಿರುವ ಕರ್ಮಕಾಂಡ ಒಂದಾ ಎರಡಾ ಕಾಂಗ್ರೆಸ್ಸೇ ಬಂದ್ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪಾದನೆ ಮಾಡುವವರು ಶುದ್ಧಹಸ್ತರಿರಬೇಕು ಆಗ ಅದಕ್ಕೆ ಬೆಲೆ ಬರುತ್ತದೆ. ಇವರು ಯಾವ ಯಾವ ಕೇಸಿನಲ್ಲಿ ಏನೇನೂ ಮಾಡಿದ್ದಾರೆ ಗೊತ್ತಿದೆ. ದಿಂಬೂ ಬಿಟ್ಟಿಲ್ಲ, ಹಾಸಿಗೆ ಬಿಟ್ಟಿಲ್ಲ, ಕಾಫಿ-ಬಿಸ್ಕತ್ ಬಿಟ್ಟಿಲ್ಲ ಎಂದು ಹರಿಹಾಯ್ದರು.ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ನೀರಾವರಿ ಯೋಜನೆವರೆಗೂ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಚಿವರಿಗೂ ಟಾರ್ಗೆಟ್ ಕೊಟ್ಟಿದ್ದರು. ಬೇಕಿದ್ದರೆ ಆಗ ಸಚಿವರಾಗಿದ್ದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಮಹದೇವಪ್ಪರವರನ್ನು ಕೇಳಿ ಯಾವ ಯಾವುದಕ್ಕೆ ಟಾರ್ಗೆಟ್ ಕೊಟ್ಟಿದ್ದರು ಎಂದು, ಹೀಗಾಗಿ ಕಾಂಗ್ರೆಸ್‌ನ ಬಂದ್ ಕರೆಗೆ ಜನ ಬೆಲೆ ಕೊಡಲ್ಲ, ಬಂದ್‌ಗೆ ಪ್ರತಿಕ್ರಿಯಿಸಲ್ಲ ಎಂದರು.ಕಾಂಗ್ರೆಸ್ ನಾಯಕರ ಕೈ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ. ಜನ ಇವರ ಆಟವನ್ನೆಲ್ಲ ನೋಡಿದ್ದಾರೆ. ಯಾರು ಸತ್ಯಹರಿಶ್ಚಂದ್ರ ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರ ಮಾತಿಗೆಲ್ಲ ಜನ ಮರಳಾಗಲ್ಲ ಎಂದರು. ಇವೆಲ್ಲ ಆಟ ನಡೆಯಲ್ಲ. ಮೇ ತಿಂಗಳಲ್ಲಿ ಚುನಾವಣೆ ಇದೆ, ಅಖಾಡ ಇದೆ ಜನ ತೀರ್ಮಾನ ಮಾಡುತ್ತಾರೆ ಎಂದರು.ಹಾಸ್ಯಾಸ್ಪದ ಬೆಳಗಾವಿಯ ನಂದಘಡ ಕೋಟೆಯಲ್ಲಿ ಸರ್ಕಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಕಾಂಗ್ರೆಸ್ ನಾಯಕಿ ಲಕ್ಷ್ಮಿಹೆಬ್ಬಾಳ್ಕರ್ ಮತ್ತೆ ಪ್ರತಿಮೆಯನ್ನು ಉದ್ಘಾಟಿಸಿರುವುದು ಹಾಸ್ಯಾಸ್ಪದ. ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಿದ್ದಾರೆ. ರಾಷ್ಟ್ರಕ್ಕಾಗಿ ಹೋರಾಡಿದ ರಾಷ್ಟ್ರನಾಯಕ ಶಿವಾಜಿ ಮಹಾರಾಜ್‌ರವರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.ಮಂಗಳೂರಿನ ಕುಕ್ಕರ್‌ಬಾಂಬ್ ಸ್ಫೋಟ ಪ್ರಕರಣದ ಹೊಣೆಯನ್ನು ಉಗ್ರಸಂಘಟನೆಯೊಂದು ಹೊತ್ತುಕೊಂಡಿದೆ. ಈ ಘಟನೆಯೇ ಸಾಮಾನ್ಯ ಘಟನೆ. ಬಿಜೆಪಿ ದೊಡ್ಡದು ಮಾಡುತ್ತಿದ್ದ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್ ಈಗ ಏನು ಉತ್ತರ ಕೊಡುತ್ತಾರೋ ಕೊಡಲಿ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.