ಕಾಂಗ್ರೆಸ್ಸಿನವರು ನಿಜಾಮ್‍ನ ಗುಲಾಮಗಿರಿಯಿಂದ ಈಗಲೂ ಹೊರಬಂದಿಲ್ಲ: ತೆಲ್ಕೂರ್

ಕಲಬುರಗಿ.ಸೆ.19: ಕಾಂಗ್ರೆಸ್ಸಿನವರು ಇಂದಿಗೂ ನಿಜಾಮ್‍ನ ಗುಲಾಮಗಿರಿಯಿಂದ ಹೊರಬಂದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೆಪ್ಟೆಂಬರ್ 17ರಂದು ವಿಮೋಚನಾ ದಿನಾಚರಣೆ ಆಚರಿಸಿಲ್ಲ. ಈ ಕುರಿತು ಕಾಂಗ್ರೆಸ್ಸಿನವರು ಸ್ಪಷ್ಟನೆ ಕೊಡಬೇಕು ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ ನಿಜಾಮರ ಗುಂಗಿನಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಅನ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದವರು ವಿಮೋಚನಾ ದಿನಾಚರಣೆತೆ ತಮ್ಮ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಿಲ್ಲ. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನವನ್ನೂ ಕಾಂಗ್ರೆಸ್ ಪಕ್ಷದವರು ಆಚರಿಸಿಲ್ಲ ಎಂದರು.
ನಿಜಾಂ ಒಬ್ಬ ಮತಾಂಧ ಆಗಿದ್ದ. ದೇಶದ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳದ ಒಬ್ಬ ಹೇಡಿಯಾಗಿದ್ದ. ಸೆಪ್ಟೆಂಬರತ್ 17ರಂದು ಸ್ವಾತಂತ್ರ್ಯ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ನೀವು ನಂಬುವುದಿಲ್ಲವೇ? ಎಂದು ಅವರು ಕಾಂಗ್ರೆಸ್ಸಿನವರಿಗೆ ಪ್ರಶ್ನಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 5000 ಕೋಟಿ ರೂ.ಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆಯವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ಸಿನವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂಬುದು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಕಲ್ಯಾಣ ಕರ್ನಾಟಕವನ್ನು ಸುದೀರ್ಘವಾಗಿ ಆಡಳಿತ ಮಾಡಿದ ಕಾಂಗ್ರೆಸ್ ಹಾಳು ಮಾಡಿದೆ. ಅದರಿಂದಾಗಿಯೇ 371(ಜೆ) ಕಲಂ ಜಾರಿಗೆ ತರಬೇಕಾಯಿತು. ಅಭಿವೃದ್ಧಿ ಮಾಡದ ಕಾಂಗ್ರೆಸ್ಸಿನವರು 371(ಜೆ) ಕಲಂ ತಾವೇ ತಂದಿದ್ದಾಗಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ 5000 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದರಿಂದ ಬಿಜೆಪಿ ಶಾಸಕರು ಶೇಕಡಾ 40 ಪರ್ಸೆಂಟೇಜ್‍ಗಾಗಿ ಜೊಲ್ಲು ಸುರಿಸಿಕೊಂಡು ಕುಳಿತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಆರೋಪಕ್ಕೆ ತಿರುಗೇಟು ನೀಡಿದ ತೆಲ್ಕೂರ್ ಅವರು, ಹಾಗೊಂದು ವೇಳೆ ಶೇಕಡಾ 40 ಪರ್ಸೆಂಟೇಜ್ ಕುರಿತು ದೂರು ಇದ್ದರೆ ಲೋಕಾಯುಕ್ತರಿಗೆ ದೂರು ಕೊಡಿ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದಲ್ಲಿಯೇ ಭ್ರಷ್ಟಾಚಾರ ಇದೆ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅರ್ಕಾವತಿ ಬಡಾವಣೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಪ್ರಕರಣ ಮುಚ್ಚಿ ಹಾಕಲು ಲೋಕಾಯುಕ್ತವನ್ನು ಬಲಹೀನಗೊಳಿಸಿ ಭ್ರಷ್ಟಾಚಾರ ನಿಗ್ರಹದಳವನ್ನು ರಚಿಸಿದರು ಎಂದು ದೂರಿದ ಅವರು, ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ತಂದರು. ಈಗ ಬಿಜೆಪಿ ಸರ್ಕಾರದ ವಿರುದ್ಧ ಲಂಚದ ದೂರುಗಳಿದ್ದರೆ ಲೋಕಾಯುಕ್ತಕ್ಕೆ ಕೊಡಿ. ತನಿಖೆ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದರು.
ಈ ಭಾಗದಲ್ಲಿ ಮರಳು ಮಾಫಿಯಾ ಕಾಂಗ್ರೆಸ್ ಕೈವಾಡದಿಂದ ನಡೆಯುತ್ತಿತ್ತು. ಚುನಾವಣೆಗೆ ಸ್ಪರ್ಧಿಸಿದಾಗ ನಿಮ್ಮ ಆಸ್ತಿ ಎಷ್ಟಿತ್ತು? ಈಗ ನಿಮ್ಮ ಆಸ್ತಿ ಎಷ್ಟಿದೆ? ಕಾಂಗ್ರೆಸ್ಸಿಗರೇ ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ. ಸಮಾಜ, ಧರ್ಮಗಳನ್ನು ಕಾಂಗ್ರೆಸ್ಸಿನವರು ಒಡೆದು ಶೇಕಡಾ 40ರಷ್ಟು ಲಂಚ ಎಂದು ಹೇಳಿದ್ದು ಯಾರು?, ಕಾಂಗ್ರೆಸ್‍ನವರ ಕೈಗೊಂಬೆ ಸಿದ್ಧರಾಮಯ್ಯ ಅವರ ಮನೆಗೆ ಭೇಟಿ ನೀಡಿ ಹೊರಬಂದು ಆರೋಪ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಪಕ್ಷದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಮುಂತಾದವರು ಉಪಸ್ಥಿತರಿದ್ದರು.