ಕಾಂಗ್ರೆಸ್ಸಿನಲ್ಲಿ ದಲಿತ ನಾಯಕರಿಗೆ ಮೂಲೆಗುಂಪು ಮಾಡಿ ಬಿಜೆಪಿ ಮೇಲೆ ಗೂಬೆ: ಸಿದ್ಧರಾಮಯ್ಯ ವಿರುದ್ಧ ತೆಲ್ಕೂರ್ ವಾಗ್ದಾಳಿ

ಕಲಬುರಗಿ.ನ.06: ಕಾಂಗ್ರೆಸ್ ಪಕ್ಷದಲ್ಲಿನ ದಲಿತ ನಾಯಕರನ್ನು ಸಂಪೂರ್ಣ ಮೂಲೆಗುಂಪು ಮಾಡಿರುವ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಲಿತ ಸಮುದಾಯವನ್ನು ಸೆಳೆದುಕೊಳ್ಳುವ ಕುತಂತ್ರದಿಂದ ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿ ಸೇರಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದು ಖಂಡನಾರ್ಹ ಎಂದು ಬಿಜೆಪಿ ಪಕ್ಷದ ರಾಜ್ಯ ವಕ್ತಾರರೂ ಅದ ಜಿಲ್ಲಾ ಸಹಕಾರ ಬ್ಯಾಂಕ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಮೂಲತ: ಜಾತ್ಯಾತೀತ ಜನತಾದಳದಲ್ಲಿದ್ದವರು. ಅಲ್ಲಿಂದ ವಲಸೆ ಬಂದ ಸಿದ್ಧರಾಮಯ್ಯ ಅವರು ಕೇವಲ ಆರು ವರ್ಷಗಳಲ್ಲಿ ಕಾಂಗ್ರೆಸ್ಸಿನಲ್ಲಿನ ದಲಿತ ನಾಯಕರನ್ನು ಮೂಲೆಗುಂಪು ಮಾಡುವ ಮೂಲಕ ಮುಖ್ಯಮಂತ್ರಿಯಾದರು ಎಂದು ಕುಟುಕಿದರು.
ಸಿದ್ಧರಾಮಯ್ಯ ಅವರ ಬಾಯಿಯಲ್ಲಿ ಮಾತ್ರ ದಲಿತರು ಹಾಗೂ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಜಪ. ಕೇವಲ ಅವರನ್ನು ಮತಬ್ಯಾಂಕ್ ಆಗಿ ಮಾಡಿಕೊಂಡು ಅವರಿಗೆ ಬಲಿಪಶು ಮಾಡುವುದನ್ನು ರಾಜ್ಯದ ಜನರು ಈಗಾಗಲೇ ಅರಿತಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿನ ಡಿಜಿಹಳ್ಳಿ, ಕೆಜಿಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ್ ಶ್ರೀನಿವಾಸ್ ಅವರ ಮನೆ ಮೇಲೆ ದಾಳಿ ಮಾಡಿದಾಗ ಇದೇ ಸಿದ್ಧರಾಮಯ್ಯ ಅವರು ತೆಪ್ಪಗಿದ್ದರು ಎಂದು ಟೀಕಿಸಿದ ಅವರು, ನಾಲಿಗೆಯ ಮೇಲೆ ಹಿಡಿತವಿಟ್ಟು ಮಾತನಾಡಲಿ ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯಾರೇ ದಲಿತರನ್ನು ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಲಿಲ್ಲ ಎಂದು ಟೀಕಿಸಿದ ಅವರು, ಇಬ್ಬರೂ ನಾಯಕರಿಗೆ ತಮ್ಮ ಸ್ವಾರ್ಥ ಮತ್ತು ಅಧಿಕಾರದ ಖುರ್ಚಿಯೇ ಮುಖ್ಯವಾಗಿದೆ ಎಂದು ಹಂಗಿಸಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸೋಲಿಸಿದ ಅಲ್ಲದೇ ಹಸಿರುಕ್ರಾಂತಿ ಹರಿಕಾರ ದಿ. ಬಾಬು ಜಗಜೀವನರಾಮ್ ಅವರನ್ನು ಪ್ರಧಾನಿಯನ್ನಾಗಿ ಮಾಡದ ಅಪಕೀರ್ತಿ ಕಾಂಗ್ರೆಸ್ ಮೇಲೆ ಇದೆ ಎಂದು ಹೇಳಿದ ಅವರು, ಬಿಜೆಪಿಯು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಅಧಿಕಾರ ನಡೆಸುತ್ತಿದೆ. ಇದು ಕಾಂಗ್ರೆಸ್ಸಿಗೆ ನಡುಕ ಹುಟ್ಟಿಸಿದೆ ಎಂದು ಅವರು ಜರಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಸಿದ್ಧರಾಮಯ್ಯ ಅವರಷ್ಟೇ ಅಲ್ಲದೇ ಬಹುತೇಕ ನಾಯಕರಿಗೆ ಬುದ್ದಿ ಭ್ರಮಣೆಯಾಗಿದೆ. ಆದ್ದರಿಂದಲೇ ದಲಿತರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಕೂಡಲೇ ಈ ಕುರಿತು ಕ್ಷಮೆ ಕೇಳಬೇಕು ಎಂದು ಅವರು ಸಿದ್ಧರಾಮಯ್ಯ ಅವರಿಗೆ ಒತ್ತಾಯಿಸಿದರು.
ದಲಿತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದು ಇಂದೂ ಸಹ ದಲಿತರಿಗೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಇಂತಹ ಕಾಂಗ್ರೆಸ್ ಪಕ್ಷದಿಂದ ದಲಿತರು ಮುಂಬರುವ ದಿನಗಳಲ್ಲಿ ಜಾಗೃತಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ್ ಅಷ್ಟಗಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತು. ಅವರಿಗೆ ಚುನಾವಣೆಯಲ್ಲಿ ಸೋಲಿಸಿದ್ದಲ್ಲದೇ ಕಾಂಗ್ರೆಸ್ ಪಕ್ಷದಲ್ಲಿರುವ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ ಹಾಗೂ ಡಾ. ಮಲ್ಲಿಕಾರ್ಜುನ್ ಖರ್ಗೆ ಮುಂತಾದ ಘಟಾನುಘಟಿ ನಾಯಕರಿಗೆ ಮೂಲೆಗುಂಪು ಮಾಡಲಾಗಿದೆ. ಸಿದ್ಧರಾಮಯ್ಯ ಅವರು ಬಿಜೆಪಿಯ ವಿರುದ್ಧ ಸುಳ್ಳು ಟೀಕೆಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಸುಳ್ಳುರಾಮಯ್ಯ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ್ ಮತ್ತಿಮೂಡ್, ಬಿಜೆಪಿ ಗ್ರಾಮೀಣ ಎಸ್‍ಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮೀನಾರಾಯಣ್ ಚಿಮ್ಮನಚೋಡಕರ್, ಸಂತೋಷ್ ಹಾದಿಮನಿ, ದೇವೆಂದ್ರ ಸಿಣ್ಣೂರ್ ಮುಂತಾದವರು ಉಪಸ್ಥಿತರಿದ್ದರು.