ಕಾಂಗ್ರೆಸ್ಸಿಗರ ಎತ್ತಿನಬಂಡಿ ಸವಾರಿ

ಬೆಂಗಳೂರು,ಸೆ.೧೩-ಅಗತ್ಯ ವಸ್ತುಗಳು ಹಾಗೂ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಶಾಸಕರು ಎತ್ತಿನಗಾಡಿ ಏರಿ ವಿಧಾನಸಭಾ ಅಧಿವೇಶನಕ್ಕೆ ಆಗಮಿಸಿ ವಿನೂತನ ಪ್ರತಿಭಟನೆ ನಡೆಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮತ್ತಿತರ ನಾಯಕರು ನಗರದಲ್ಲಿ ಎತ್ತಿನ ಬಂಡಿಯಲ್ಲಿ ಜಾಥಾ ನಡೆಸಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ವಿಧಾನಸೌಧಕ್ಕೆ ಆಗಮಿಸಿದರು.
ಕುಮಾರಕೃಪಾದ ಸರ್ಕಾರಿ ನಿವಾಸದಿಂದ ಸಿದ್ದರಾಮಯ್ಯ, ಸದಾಶಿವನಗರದ ಮನೆಯಿಂದ ಡಿ.ಕೆ. ಶಿವಕುಮಾರ್, ಎತ್ತಿನ ಬಂಡಿ ಏರಿ ವಿಧಾನಸೌಧದತ್ತ ಹೊರಟಾಗ ಸಾವಿರಾರು ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವತಃ ಎತ್ತಿನ ಬಂಡಿಯನ್ನು ಚಲಾಯಿಸಿದರೆ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್. ಪಾಟೀಲ, ಶಾಸಕ ಎಂ.ಬಿ. ಪಾಟೀಲ ಪ್ರಕಾಶ್ ರಾಥೋಡ್ ಸಾಥ್ ನೀಡಿದರು.

ಇಂಧನದರ ಹಾಗೂ ಬೆಲೆ ಏರಿಕೆ ವಿರೋಧಿಸಿ ವಿಧಾನಸಭಾಧಿವೇಶನಕ್ಕೆ ಎತ್ತಿನಗಾಡಿ ಮೇಲೆ ಆಗಮಿಸುವ ಮೂಲಕ ಕಾಂಗ್ರೆಸ್ ನಾಯಕರು ವಿನೂತನ ಪ್ರತಿಭಟನೆ ನಡೆಸಿದರು. ವಿಧಾನಸೌಧದ ಮುಂದೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರತ್ತ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಕೈಬೀಸಿ ಹುರಿದುಂಬಿಸಿದರು.


ಈ ವೇಳೆ ಸಿದ್ದರಾಮಯ್ಯ ಅವರ ಎತ್ತಿನ ಬಂಡಿ ಹಿಂಬಾಲಿಸಿದ ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಿಗೆ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ಎತ್ತಿನ ಬಂಡಿಯಲ್ಲೇ ವಿಧಾನಸೌಧದತ್ತ ಹೊರಟರು.
ಎತ್ತಿನ ಬಂಡಿಯಲ್ಲಿ ಹೊರಡುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಬಿಜೆಪಿ ಸರ್ಕಾರ ದೇಶದ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ ೨೫ ಕಡಿಮೆ ಮಾಡಿ ೭೫ ರೂ. ಗಳಿಗೆ ಇಳಿಸಬೇಕು ಎಂದು ಆಗ್ರಹಿಸಿದರು.
ಜನಸಾಮಾನ್ಯರು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ದರವನ್ನೂ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರ ಸಂಕಷ್ಟವನ್ನು ಸರ್ಕಾರ ಅರಿಯಬೇಕು. ಇದಕ್ಕಾಗಿ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದೇವೆ? ಎಂದರು.
ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಪ್ರತಿದಿನ ಜನರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ಸರ್ಕಾರ ಕೆಳಗಿಳಿಸುವವರೆಗೂ ನಾವು ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಗರದ ವಿವಿಧ ಕಡೆಗಳಿಂದ ಕಾಂಗ್ರೆಸ್ ಶಾಸಕರು ಏಕಕಾಲಕ್ಕೆ ಎತ್ತಿನ ಬಂಡಿಗಳಲ್ಲಿ ವಿಧಾನಸೌಧದತ್ತ ಹೊರಟಿದ್ದರಿಂದ ನಗರದ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಎತ್ತಿನ ಬಂಡಿಗಳು ವಿಧಾನಸೌಧದ ಕಡೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆದಿದ್ದರಿಂದ ಪೊಲೀಸರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಕೊನೆಗೆ ನಾಯಕರು, ಶಾಸಕರನ್ನು ಮಾತ್ರ ಎತ್ತಿನ ಬಂಡಿಗಳಲ್ಲಿ ಹೋಗಲು ಅವಕಾಶ ನೀಡಿ ಉಳಿದವರಿಗೆ ಅವಕಾಶ ನೀಡದೆ ಹೊರಕಳುಹಿಸಲಾಯಿತು.