ಕಾಂಗ್ರೆಸ್‌ನಿಂದ ೨ನೇ ಪಟ್ಟಿ ಬಿಡುಗಡೆ

ನವದೆಹಲಿ,ನ.೧೧- ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ೪೬ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪಕ್ಷ ಗುಜರಾತ್ ಚುನಾವಣೆಗೆ ಈಗಾಗಲೇ ೪೩ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳೆದವಾರ ಬಿಡುಗಡೆ ಮಾಡಿತ್ತು. ಇದರೊಂದಿಗೆ ಒಟ್ಟು ೮೩ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಅಂತಿಮಗೊಳಿಸಿದಂತಾಗಿದೆ.
ಬಿಜೆಪಿ ನಿನ್ನೆಯಷ್ಟೇ ತನ್ನ ೧೬೦ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಗುಜರಾತ್ ವಿಧಾನಸಭೆಗೆ ಡಿ. ೧ ಮತ್ತು ಡಿ. ೫ ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ೨ನೇ ಪಟ್ಟಿಯಲ್ಲಿ ಪಕ್ಷದ ಪ್ರಮುಖ ನಾಯಕರುಗಳಾದ ಅರ್ಜುನ್‌ಬಾಯ್ ಗುಡಿಯಾ ಅವರಿಗೆ ಬುಜ್‌ನಿಂದ ಬೀಕಾಬಾಯಿ ಜೋಷಿ ಅವರಿಗೆ ಜುನಾಘಡದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಪೂರ್ವ ಸೂರತ್‌ನಿಂದ ಅಸ್ಲಾಂ ಸೈಕಲ್‌ವಾಲಾ, ಉತ್ತರ ಸೂರತ್‌ನಿಂದ ಅಶೋಕ್‌ಬಾಯ್ ಪಟೇಲ್ ಮತ್ತು ವಲ್ಸಾದಿಂದ ಕಮಾಲ್‌ಕುಮಾರ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ.
ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಎರಡು ದಶಕಗಳಿಗೂ ಹೆಚ್ಚುಕಾಲದಿಂದ ಬಿಜೆಪಿ ಅಧಿಕಾರದಲ್ಲಿದ್ದು, ಕಾಂಗ್ರೆಸ್ ಪಕ್ಷ ೨೦ ವರ್ಷದಿಂದ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿಲ್ಲ. ಈ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಕಾಂಗ್ರೆಸ್ ಜತೆಗೆ ಆಮ್ ಆದ್ಮಿ ಪಕ್ಷದ ಪೈಪೋಟಿಯನ್ನು ಎದುರಿಸುತ್ತಿದೆ.