ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ಆರಂಭ’  


ಉಡುಪಿ, ನ.೮- ಸುರತ್ಕಲ್ ಟೋಲ್ ತೆರವು ವಿಚಾರವು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಅವರಿಗೆ ಈ ಕುರಿತು ನಾವು ಈಗಾಗಲೇ ವರದಿ ಕೊಟ್ಟಿದ್ದೇವೆ. ಅದರಂತೆ ಅವರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆದಿಉಡುಪಿ ಹೆಲಿಪ್ಯಾಡ್‌ನಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭತ್ತ ಖರೀದಿ ಕೇಂದ್ರ ಸ್ಥಾಪಿಸುವ ಬೇಡಿಕೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇವೆ. ನಾನು ಬೆಂಗಳೂರು ಹೋದ ತಕ್ಷಣವೇ ಸಭೆ ಕರೆದು ಮುಂದಿನ ವಾರ ಅದರ ಬಗ್ಗೆ ತೀಮಾರ್ನ ತೆಗೆದುಕೊಳ್ಳಲಾಗುವುದು. ಜೀವನದಲ್ಲಿ ಇಂತಹ ಭ್ರಷ್ಟ ಸರಕಾರ ನೋಡಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ, ೫೦ ವರ್ಷ ಪೂರ್ಣ ಭ್ರಷ್ಟ ಸರಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರ ಆರಂಭವಾಗಿದ್ದೆ ಕಾಂಗ್ರೆಸ್‌ನಿಂದ. ಕಾಂಗ್ರೆಸ್ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ನಮ್ಮ ಆರೋಪ ಮುಚ್ಚಿ ಹಾಕಿಕೊಳ್ಳಲು ಖರ್ಗೆ ಆರೋಪ ಮಾಡುತ್ತಿದ್ದಾರೆ. ಸುಳ್ಳು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಸುಳ್ಳು ಎಂದು ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ಸಿದ್ದರಾಮಯ್ಯ ಅವರ ಭ್ರಮೆ ಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನಾವೇ ಬರುತ್ತೇವೆ ಎಂದು ಹೇಳಿದ್ದರು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಾರರು ಎಂದು ಹೇಳುತ್ತಿದ್ದರು. ಸಿದ್ದರಾಮಯ್ಯನವರು ಹೇಳಿದ ಮಾತು ಗಳು ಯಾವತ್ತಿಗೂ ಸತ್ಯವಾಗಿಲ್ಲ. ಇವರು ಸಮಾಜವನ್ನು ಒಡೆದು ಆಳುವ ನೀತಿ ಯಿಂದ ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಭ್ರಷ್ಟಾಚಾರದ ಮೂರು ನಾಲ್ಕು ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆಗಳು ಆಗಲಿವೆ ಎಂದರು. ಮುರುಗಾ ಸ್ವಾಮೀಜಿ ಮೇಲಿನ ಪೋಕ್ಸೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿ ಇದೆ. ಕಾನೂನು ಅದರ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.